
ರಾಮನಗರ: ಕನಕಪುರ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದ್ದು, ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದರು. ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಕಾರ್ಯ ಡಿಸೆಂಬರ್ 28ರಿಂದ ಸ್ಥಗಿತಗೊಂಡಿದೆ ಎಂದು ವರದಿ ವಿವರಿಸಿದೆ.
ಸಾತನೂರು ಪೊಲೀಸರು ಕಪಾಲಿ ಬೆಟ್ಟದಲ್ಲಿ ಬಿಗಿ ಭದ್ರತೆಗಾಗಿ ಕಾವಲು ಕಾಯುತ್ತಿರುವುದಾಗಿ ವರದಿ ತಿಳಿಸಿದೆ. ಇದೀಗ ವಿವಾದಿತ ಜಾಗದಲ್ಲಿ ಯೇಸು ಪ್ರತಿಮೆ ಕಾಮಗಾರಿಗೆ ಬ್ರೇಕ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಪಾಲಿಬೆಟ್ಟದಲ್ಲಿ 115 ಅಡಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದ್ದು, ಈ ಬಗ್ಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಯೇಸು ಪ್ರತಿಮೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೋ ಅಥವಾ ಸ್ವಯಂ ಆಗಿ ಪ್ರತಿಮೆ ನಿರ್ಮಾಣ ಕಾರ್ಯ ನಿಲ್ಲಿಸಲಾಗಿದೆಯೋ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಟಿವಿ9 ವರದಿ ತಿಳಿಸಿದೆ.
Comments are closed.