ರಾಷ್ಟ್ರೀಯ

ನಾನು ಮೋಸ ಹೋಗಿದ್ದೇನೆ ಎಂದು ಯುವಕ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಪ್ರಿಯತಮೆ ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ತಲ್ಲಾಪುಡಿಯ ನಿವಾಸಿ ಇರ್ಲಾಪತಿ ನವೀನ್ (28) ಆತ್ಮಹತ್ಯೆಗೆ ಶರಣಾದ ಯುವಕ. ಮೃತ ನವೀನ್ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಮಾತಾಡುತ್ತಿರಲಿಲ್ಲ.

ನವೀನ್ ಎರಡು ದಿನಗಳ ಹಿಂದೆ ಹೈದರಾಬಾದ್‍ಗೆ ಹೋಗಿದ್ದು, ಶುಕ್ರವಾರ ಬೆಳಿಗ್ಗೆ ಗ್ರಾಮಕ್ಕೆ ವಾಪಸ್ ಬಂದಿದ್ದಾನೆ. ನಂತರ ನವೀನ್ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ನೋಡಿ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನವೀನ್ ಮೃತಪಟ್ಟಿದ್ದಾನೆ.

ತಾನು ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ನವೀನ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ “ನಾನು ಮೋಸ ಹೋಗಿದ್ದೇನೆ” ಎಂದು ನವೀನ್ ತನ್ನ ಮೊಬೈಲ್‍ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಜೊತೆಗೆ ಯಾರನ್ನೂ ಮೋಸ ಮಾಡಬೇಡಿ ಎಂದು ಬರೆದುಕೊಂಡಿದ್ದಾನೆ.

ನವೀನ್ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬದವರು ದೂರು ನೀಡಿದ್ದು, ತನಿಖೆಯನ್ನು ಮುಂದುವರಿಸುವುದಾಗಿ ಇನ್ಸ್‌ಪೆಕ್ಟರ್ ಜಿ.ಸತೀಶ್ ತಿಳಿಸಿದ್ದಾರೆ.

Comments are closed.