
ರಾಯಚೂರು: ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಬೆಳಗಬಹುದಾಗಿದ್ದ ಈ ಬಾಲಕಿ ಇದೀಗ ತನ್ನದಲ್ಲದ ತಪ್ಪಿನಿಂದಾಗಿ ತನ್ನದೇ ಭವಿಷ್ಯವನ್ನು ದೊಡ್ಡ ಕ್ರೀಡಾಪಟುವಾಗಬೆಕು ಎಂಬ ಕನಸನ್ನು ಕಳೆದುಕೊಳ್ಳಬೇಕಾಗಿರುವುದು ದುರಂತ.
ಈಕೆ ಸಿರವಾರದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಚಾಮುಂಡಿ. ಕುರಕುಂದಾದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಲುವಾಗಿ ಪ್ರಾಚಾರ್ಯ ಹೇಮಣ್ಣ ಹಾಗೂ ದೈಹಿಕ ಶಿಕ್ಷಕ ಸಂತೋಷ್ ಎಂಬುವವರು ಶಾಲೆಯ ಎಲ್ಲಾ ವಿದ್ಯಾರ್ಥಿನಿಯರನ್ನು ಕಳೆದ ಆಗಸ್ಟ್ 26 ರಂದು ಟಾಂ ಟಾಂ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಈಕೆಯೂ ಜತೆಗೆ ತೆರಳಿದ್ದಳು.
ಆದರೆ, ಕ್ರೀಡಾಕೂಟದಲ್ಲಿ ಜಯಸಿದ ಖುಷಿಯಲ್ಲಿ ಊರಿಗೆ ಮರಳುವಾಗ ಟಾಂಟಾಂ ಪಲ್ಟಿಯಾಗಿದೆ. ಪರಿಣಾಮ ಅಪಘಾತದಲ್ಲಿ ಗಾಯಗೊಂಡ ಬಾಲಕಿಯರು ಇದೀಗ ಸಂಕಷ್ಟ ಅನುಭವಿಸುವಂತಾಗಿದೆ. ಅಪಘಾತದಲ್ಲಿ 35ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿವೆ. ಅದರಲ್ಲಿ 3 ಮಕ್ಕಳ ಸ್ಥಿತಿಯಂತೂ ಚಿಂತಾಜನಕವಾಗಿದೆ.
ಅಡವಿ ಅಮರೇಶ್ವರ ದ ಚಾಮುಂಡಿ ಎಂಬ ಬಾಲಕಿ ರಾಜ್ಯಮಟ್ಟದ ವಾಲಿಬಾಲ್ ಪಟುವಾಗಿದ್ದಳು. ಆದರೆ, ಅಪಘಾತದಲ್ಲಿ ಅವಳು ತನ್ನ ಕೈಯನ್ನೇ ಕಳೆದುಕೊಳ್ಳುವಂತಾಗಿದೆ. ಇದೀಗ ಅವಳು ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಾಚನೂರಿನ ದೀಪಾ ಎಂಬ ಬಾಲಕಿಗೂ ತೀವ್ರ ಗಾಯಗಳಾ ಗಿದ್ದು ಆಕೆ ಎದ್ದು ನಡೆಯಲೂ ಆಗದಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಇರುವಂತಾಗಿದೆ. ಇನ್ನೊಬ್ಬ ಬಾಲಕಿ ಗುಡದಿನ್ನಿಯ ಸುನೀತಾ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ.
ಅಪಘಾತದ ನಂತರ ಈ ಮೂರೂ ವಿದ್ಯಾರ್ಥಿಗಳ ಶಾಲೆ, ಕ್ರೀಡೆಯ ಕನಸು ನುಚ್ಚುನೂರಾಗಿದೆ. ಇವರನ್ನು ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗಿದ್ದ ಪ್ರಾಚಾರ್ಯ ಹೇಮಣ್ಣ ಹಾಗು ದೈಹಿಕ ಶಿಕ್ಷಕ ಸಂತೋಷ್ ಅವರನ್ನು ಆ ಸಂದರ್ಭದಲ್ಲಿ ಅಮಾನತ್ತು ಮಾಡಲಾಗಿತ್ತಾದರೂ, ಕೆಲವು ದಿನಗಳ ನಂತರ ಹೇಮಣ್ಣ ಅವರನ್ನು ಸಿರವಾರ ಸಿರವಾರದ ಇಂದಿರಾಗಾಂಧಿ ಶಾಲೆಗೆ ಹಾಗೂ ಸಂತೋಷ್ ಅವರನ್ನು ಜೇವರ್ಗಿ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.
ಆದರೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿರುವ ಬಾಲಕಿಯರು ಮಾತ್ರ ತಮ್ಮ ಭವಿಷ್ಯವನ್ನು ಕಳೆದುಕೊಂಡು ಪರದಾಡುವಂತಹ ಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಈ ಕುರಿತು ಗಮನವಹಿಸಬೇಕಿದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಸೂಕ್ತ ಪರಿಹಾರ ಮತ್ತು ಮರಳಿ ಶಾಲೆಗೆ ಹೋಗಲು ಸಹಕಾರ ನೀಡಬೇಕಿದೆ. ಈ ಮೂಲಕ ಕಳೆದುಹೋದ ಅವರ ಭವಿಷ್ಯವನ್ನು ಮತ್ತೆ ಕಟ್ಟಿಕೊಡಬೇಕಿದೆ.
Comments are closed.