ರಾಷ್ಟ್ರೀಯ

ದೇಶದಲ್ಲಿ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ರ‍್ಯಾಂಡ್‌ಸ್ಟಡ್‌ ಸಮೀಕ್ಷೆ ಬಹಿರಂಗ

Pinterest LinkedIn Tumblr


ಹೊಸದಿಲ್ಲಿ: ಟೆಕ್ಕಿಗಳಿಗೇ ಎಲ್ಲರಿಗಿಂತ ಹೆಚ್ಚು ಸಂಬಳ ಸಿಗುತ್ತದೆ. ಹಾಗೂ ಮಾಹಿತಿ ತಂತ್ರಜ್ಞಾನ ನಗರಿ ಬೆಂಗಳೂರು ಇದೇ ಕಾರಣಕ್ಕಾಗಿ ಅತಿ ಹೆಚ್ಚು ಸಂಬಳದ ಉದ್ಯೋಗ ನೀಡುವ ನಗರವಾಗಿದೆ ಎಂದು ಗುರುವಾರ ಸಮೀಕ್ಷೆ ತಿಳಿಸಿದೆ.

ರ‍್ಯಾಂಡ್‌ಸ್ಟಡ್‌ ಇನ್‌ಸೈಟ್ಸ್‌ ಸ್ಯಾಲರಿ ಟ್ರೆಂಡ್ಸ್‌ 2019 ವರದಿಯ ಪ್ರಕಾರ ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ 2019ರಲ್ಲಿ ಪ್ರತಿಭಾವಂತ ಜ್ಯೂನಿಯರ್‌ ಲೆವೆಲ್‌ ಟೆಕ್ಕಿಗಳಿಗೆ ವಾರ್ಷಿಕ ಸರಾಸರಿ 5.27 ಲಕ್ಷ ರೂ. ವೇತನ ಲಭಿಸಿದೆ. ಮಧ್ಯಮಸ್ತರದ ಟೆಕ್ಕಿಗಳಿಗೆ 16.45 ಲಕ್ಷ ರೂ. ಮತ್ತು ಹಿರಿಯ ಉದ್ಯೋಗಿಗಳಿಗೆ 35.45 ಲಕ್ಷ ರೂ. ದೊರೆತಿದೆ.

2017 ಮತ್ತು 2018ರಲ್ಲಿ ಕೂಡ ವೇತನ ಟ್ರೆಂಡ್‌ನಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿತ್ತು. ಜ್ಯೂನಿಯರ್‌ ಮಟ್ಟದವರಿಗೆ ಸಿಗುವ ವೇತನ ವಿಚಾರದಲ್ಲಿ ಹೈದರಾಬಾದ್‌ (5 ಲಕ್ಷ ರೂ.), ಮುಂಬಯಿ (4.59 ಲಕ್ಷ ರೂ.), ಅನುಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಮಧ್ಯಮ ಸ್ತರದ ವೃತ್ತಿಪರರ ವಿಭಾಗದಲ್ಲಿಮುಂಬಯಿ (15.07 ಲಕ್ಷ), ದಿಲ್ಲಿ 14.5 ಲಕ್ಷ ರೂ. ಸರಾಸರಿ ವೇತನ ನೀಡುವ ನಗರಗಳಾಗಿವೆ. ಹಿರಿಯರ ಮಟ್ಟದಲ್ಲಿ ಮುಂಬಯಿ 33.95 ಲಕ್ಷ ರೂ. ಪುಣೆ 32.68 ಲಕ್ಷ ರೂ. ವೇತನ ನೀಡುವ ನಗರಗಳಾಗಿವೆ. ಕಿರಿಯ ಮತ್ತು ಹಿರಿಯ ಉದ್ಯೋಗಿಗಳಿಗೆ ಅತಿ ಹೆಚ್ಚು ವೇತನ ನೀಡುವ ವಲಯ ಐಟಿ, ಡಿಜಿಟಲ್‌ ಆಗಿದೆ. ಹಿರಿಯ ವೃತ್ತಿಪರರಿಗೆ ಡಿಜಿಟಲ್‌ ಮಾರುಕಟ್ಟೆ ಹೆಚ್ಚು ಸಂಬಳ ಒದಗಿಸುತ್ತದೆ. (ಸರಾಸರಿ 35.65 ಲಕ್ಷ ರೂ.)

2019ರಲ್ಲಿ ಭಾರಿ ಬೇಡಿಕೆಯ ಮತ್ತು ವೇತನ ಇರುವ ಹುದ್ದೆಗಳನ್ನೂ ಹೆಸರಿಸಲಾಗಿದೆ. ಅವುಗಳ ವಿವರ ಇಂತಿದೆ.

”ಪ್ರತಿಭೆಯ ಜತೆಗೆ ಸೂಕ್ತ ಕೌಶಲವನ್ನು ಹೊಂದಿರುವವರಿಗೆ ಉನ್ನತ ಮಟ್ಟದ ವೇತನ ಸಿಗುತ್ತದೆ” ಎಂದು ರ‍್ಯಾಂಡ್‌ಸ್ಟಡ್‌ ಇಂಡಿಯಾದ ಸಿಇಒ ಪೌಲ್‌ ಡುಪಿಸ್‌ ತಿಳಿಸಿದ್ದಾರೆ.

ರ‍್ಯಾಂಡ್‌ಸ್ಟಡ್‌ ಇನ್‌ಸೈಟ್ಸ್‌ ವೇತನ ವರದಿಯಲ್ಲಿ 15 ಉದ್ಯಮ ವಲಯಗಳಲ್ಲಿನ 1 ಲಕ್ಷ ಉದ್ಯೋಗಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು.

ಸ್ಪೆಷಲಿಸ್ಟ್‌ಗಳಿಗೆ ಹೆಚ್ಚು ವೇತನ
ಕಾರ್ಪೊರೇಟ್‌ ವಲಯದಲ್ಲಿ ಕಂಪ್ಲೈಯನ್ಸ್‌ ಸ್ಪೆಷಲಿಸ್ಟ್‌ಗಳಿಗೆ ವಾರ್ಷಿಕ ಸರಾಸರಿ ವೇತನ (ಸಿಟಿಸಿ) 31.09 ಲಕ್ಷ ರೂ. ಇರುತ್ತದೆ. ಕಂಪ್ಲೈಯನ್ಸ್‌ ಸ್ಪೆಷಲಿಸ್ಟ್‌ಗಳು ಕಂಪನಿಯ ಕಾರ್ಯಾಚರಣೆ, ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಪೈಥಾನ್‌ ಸ್ಪೆಷಲಿಸ್ಟ್‌ಗಳಿಗೆ ಕೂಡ ತೀವ್ರ ಬೇಡಿಕೆ ಇದೆ. ಇವರು ಪ್ರೋಗ್ರಾಮಿಂಗ್‌ ಲಾಂಗ್ವೇಜ್‌ ಪರಿಣತರು. ಇವರಿಗೆ ವಾರ್ಷಿಕ ಸರಾಸರಿ ವೇತನ 20.24 ಲಕ್ಷ ರೂ.ಗಳಾಗಿದೆ. ಹಡೂಪ್‌ ಸ್ಪೆಷಲಿಸ್ಟ್‌ಗಳಿಗೆ (ಡೇಟಾ ತಜ್ಞರು) ವಾರ್ಷಿಕ 19.01 ಲಕ್ಷ ರೂ. ಸಂಬಳ ಸಿಗುತ್ತದೆ.

Comments are closed.