ಉಡುಪಿ: ಉಡುಪಿ ಜಿಲ್ಲೆಯ ಪಡುಕೆರೆ ಬೀಚ್ ಪ್ರದೇಶವು ಮರೀನಾಗೆ ಹೇಳಿ ಮಾಡಿಸಿದಂತಿದ್ದು, ಇಲ್ಲೇನಾದರೂ ಮರೀನಾ ನಿರ್ಮಾಣವಾದಲ್ಲಿ ದೇಶದಲ್ಲಿ ಪ್ರಪ್ರಥಮ ಮರೀನಾ ಹೊಂದಿರುವ ಹೆಗ್ಗಳಿಕೆ ಉಡುಪಿ ಜಿಲ್ಲೆಯದ್ದಾಗಲಿದೆ. ಪ್ರವಾಸೋದ್ಯಮಕ್ಕೂ, ದೇಶದ ಆರ್ಥಿಕತೆಗೂ ಶಕ್ತಿ ತುಂಬುವ ಈ ಯೋಜನೆಯ ಸಂಪೂರ್ಣ ನೀಲ ನಕ್ಷೆ ತಯಾರಿಸಿ, ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾಪ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮರೀನಾ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಕೊಚ್ಚಿನ್ ಮಾತ್ರ ಮರೀನಾ ಹೊಂದಿದ್ದು, ಅದೂ ಕೂಡಾ ಅಂತರಾಷ್ಟ್ರೀಯ ಬೋಟ್ ಮತ್ತು ವಿಹಾರ ನೌಕೆಗಳನ್ನು ತಮ್ಮಲ್ಲಿ ಉಳಿಸಿಕೊಳ್ಳುವ ಸೌಲಭ್ಯಗಳನ್ನು ಹೊಂದಿಲ್ಲ. ಪಡುಕೆರೆ ಬೀಚಿನಲ್ಲಿ 3 ಕಿ.ಮೀ ಹಿನ್ನೀರಿನ ಪ್ರದೇಶವಿದ್ದು, ಇಲ್ಲಿನ ನೈಸರ್ಗಿಕ ದ್ವೀಪಗಳಿರುವ ಪ್ರದೇಶದಲ್ಲಿ ವಿದೇಶೀ ನೌಕೆಗಳು ತಂಗುವಂತಹ ಮರೀನಾವನ್ನು ನಿರ್ಮಿಸಬಹುದು. ಅಂತರಾಷ್ಟ್ರೀಯ ನೌಕಾ ವಿಹಾರಿಗಳನ್ನು ಆಕರ್ಷಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಯೋಜನೆಯು ಸಹಕಾರಿಯಾಗಲಿದೆ.ವಿವಿಧ ಕಾರಣಗಳಿಗಾಗಿ ಬೇರೆ ಬೇರೆ ದೇಶಗಳ ನೌಕೆಗಳು ಅರಬ್ಬೀ ಸಮುದ್ರ ಮಾರ್ಗವಾಗಿ ದಕ್ಷಿಣ ಏಷಿಯಾ ದೇಶಗಳಿಗೆ ಸಾಗಿ ಅಲ್ಲಿಯೇ ಲಂಗರು ಹಾಕುತ್ತವೆ. ಒಂದು ವರ್ಷದಲ್ಲಿ ಸರಿ ಸುಮಾರು 4000 ನೌಕೆಗಳು ಈ ಮಾರ್ಗದಲ್ಲಿ ಸಾಗುತ್ತಿದ್ದು, ನೌಕೆಗಳು ತಂಗಬಹುದಾದ ತೀರಗಳ ಕೊರತೆಯಿದೆ. ಪಡುಕೆರೆ ತೀರ ಪ್ರದೇಶದಲ್ಲಿ ಮರೀನಾ ನಿರ್ಮಿಸಿದಲ್ಲಿ ಈ ಮಾರ್ಗದಲ್ಲಿ ಸಾಗುವ ನೌಕೆಗಳಿಗೆ ತಂಗುದಾಣ ಸಿಗುವಂತಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಾಣವಾಗುವ ಈ ಮರೀನಾದಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರಲಿದೆ, ಜೊತೆಗೆ ಮಲ್ಪೆ-ಪಡುಕೆರೆ ಬೀಚ್ ಸುತ್ತಮುತ್ತಲಿನ ಪ್ರದೇಶದಲ್ಲಿ ಉದೋಗಾವಕಾಶಗಳೂ ಹೆಚ್ಚಲಿವೆ.
ಮರೀನಾದೊಳಗಡೆ ತೇಲುವ ಸೇತುವೆ, ಹೋಟೇಲ್, ರೆಸ್ಟೋರೆಂಟ್ ಮತ್ತು ಮನೆಗಳನ್ನೂ ನಿರ್ಮಿಸುವ ಅವಕಾಶವಿದ್ದು, ಇದರಿಂದಲೂ ಆದಾಯಗಳಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ್, ಪ್ರವಾಸೋದ್ಯಮ ಇಲಾಖೆ ಸಮಾಲೋಚಕ ಅಮಿತ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಒಳನಾಡು ಮತ್ತು ಜಲಸಾರಿಗೆ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ್ ಭಟ್, ಪ್ರವಾಸ ಮತ್ತು ಪ್ರಯಾಣ ಸಂಘದ ಅಧ್ಯಕ್ಷ ನಾಗರಾಜ್ ಹೆಬ್ಬಾರ್, ಎಸಿಟಿ ಕಾರ್ಯದರ್ಶಿ ಗೌರವ್ ಶೆಣವ್, ಕಾಪು ಬೀಚ್ ನಿರ್ವಹಣಾ ಸಮಿತಿಯ ಯತೀಶ್ ಬೈಕಂಪಾಡಿ, ಮಲ್ಪೆ ಬೀಚ್ ನಿರ್ವಹಣಾ ಸಮಿತಿಯ ಸುದೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
Comments are closed.