ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಡಿ. 11 ರಿಂದ 14 ರ ವರೆಗೆ ಜರುಗಿದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟವು ಸಮಾರೋಪಗೊಂಡಿದೆ.

ಈ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಜಯ ಸಾಧಿಸಿ ಟ್ರೋಫಿ ಗೆದ್ದುಕೊಂಡಿದೆ. ದಕ್ಷಿಣ (ಭಾರತ) ವಲಯದ ಏಳು ರಾಜ್ಯಗಳ ಒಟ್ಟು 91 ವಿಶ್ವವಿದ್ಯಾನಿಲಯ ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ಚೆನ್ನೈನ ವೇಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಅಡ್ವಾನ್ಸ್ ಸ್ಟಡೀಸ್ ತಂಡ ದ್ವಿತೀಯ ಸ್ಥಾನ, ತಿರುನೇಲ್ವೇಲಿ ಎಂ.ಎಸ್. ವಿವಿ ತಂಡ ತೃತೀಯ ಹಾಗೂ ಚೆನ್ನೈ ಎಸ್.ಆರ್.ಎಂ. ವಿವಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿವೆ. ಶುಕ್ರವಾರ ಮತ್ತು ಶನಿವಾರ ಜರಗಿದ ಫೈನಲ್ ಲೀಗ್ ಪಂದ್ಯಾಟಗಳಲ್ಲಿ ಉಳಿದ ಮೂರು ತಂಡಗಳೊಂದಿಗೆ ಸೆಣಸಾಡಿದ ಆತಿಥೇಯ ಮಂಗಳೂರು ವಿವಿ ತಂಡ ಎಲ್ಲ ಪಂದ್ಯಗಳಲ್ಲಿ ಗೆಲ್ಲುವುದರೊಂದಿಗೆ 6 ಅಂಕಗಳನ್ನು ಗಳಿಸಿ ಮೊದಲ ಸ್ಥಾನಕ್ಕೇರಿತು. ಕಳೆದ ಸಾಲಿನಲ್ಲಿ ದಕ್ಷಿಣ ವಲಯ ಮಟ್ಟದಲ್ಲಿ ಮಂಗಳೂರು ವಿವಿ ತೃತೀಯ ಸ್ಥಾನ ಹಾಗೂ ಅಖಿಲ ಭಾರತ ಮಟ್ಟದಲ್ಲಿ ಚತುರ್ಥ ಸ್ಥಾನವನ್ನು ಪಡೆದಿತ್ತು.
ಚೆನ್ನೈನ ವೆಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ ಆ್ಯಂಡ್ ಅಡ್ವಾನ್ಸ್ಡ್ ಸ್ಟಡೀಸ್ ತಂಡವು ಮೂರು ತಂಡಗಳನ್ನು ಎದುರಿಸಿ ಎರಡರ ವಿರುದ್ಧ ಗೆಲುವು ಸಾಧಿಸಿ 4 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ತಿರುನೇಲ್ವೇಲಿ ಎಂ.ಎಸ್. ವಿವಿ ತಂಡ ಮೂರು ತಂಡಗಳೊಂದಿಗೆ ಸೆಣಸಾಡಿ ಒಂದರ ವಿರುದ್ಧ ಜಯಿಸಿ 2 ಅಂಕಗಳೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಎಲ್ಲ ಪಂದ್ಯಗಳನ್ನು ಸೋತ ಚೆನ್ನೈ ಎಸ್.ಆರ್.ಎಂ. ವಿವಿ ತಂಡ ಪಂದ್ಯಾಕೂಟ ಒಟ್ಟು ಲೀಗ್ ಪಂದ್ಯಗಳಲ್ಲಿ ಗಳಿಸಿದ ಆಧಾರದಲ್ಲಿ ಚತುರ್ಥ ಸ್ಥಾನ ಪಡೆಯಿತು.
ತೆಂಕನಿಡಿಯೂರು ಕಾಲೇಜಿನ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ.ಎಂ. ಖಾನ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ., ಉಪನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ತಮಿಳ್ನಾಡು ಫಿಸಿಕಲ್ ಎಜುಕೇಶನ್ ವಿ.ವಿ.ಯ ಮಾಜಿ ಕುಲಪತಿ ವೈದ್ಯನಾಥನ್, ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಎಸ್. ಹೆಗ್ಡೆ, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷ ಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಉಡುಪಿ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎ. ದೇವ್ ಆನಂದ, ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ಬಿನ ಪದಾಧಿಕಾರಿಗಳು, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕ್ರೀಡಾಕೂಟದ ಸಂಚಾಲಕ ಡಾ. ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಂದ್ಯಾಟದ ನೆನಪಿಗಾಗಿ ಪ್ರೊ. ಪ್ರಸಾದ್ ರಾವ್ ಸಂಪಾದಿಸಿದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಗಣ್ಯರು ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು.
Comments are closed.