ಕರಾವಳಿ

ಬಡ ಬಾಣಂತಿ ಸಾವಿಗೆ ಸಿಗದ ನ್ಯಾಯ; ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಕುಟುಂಬಿಕರ ಆಕ್ರೋಷ

Pinterest LinkedIn Tumblr

ಕುಂದಾಪುರ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗು ಹಡೆದ ಬಾಣಂತಿಯೊಬ್ಬರು ರಕ್ತ ಸ್ರಾವದಿಂದ ಬಳಲಿ ಸಾವನ್ನಪ್ಪಿದ‌ ಘಟನೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿತ್ತು. ಪ್ರಸೂತಿ ತಜ್ಞೆ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಮೃತರ ಕುಟುಂಬಿಕರು ಸೋಮವಾರದಂದು ಕುಂದಾಪುರದ ಸರಕಾರಿ ಆಸ್ಪತ್ರೆಗೆ ನ್ಯಾಯ ಕೇಳಲು ಬಂದಿದ್ದು ವೈದ್ಯೆ ಮಾತ್ರ ತನ್ನದೇನು ತಪ್ಪಿಲ್ಲ ಎಂದು ಸಬೂಬು ನೀಡಿದಾಗ ಮೃತಳ ಕುಟುಂಬಿಕರು ಹಿಡಿ ಶಾಪ ಹಾಕಿದ ಘಟನೆ ನಡೆದಿದೆ.

(ಮೃತ ಸುಜಾತ)

ಕುಂದಾಪುರ ಅಂಕದಕಟ್ಟೆಯ ನಿವಾಸಿ ಸುಧೀರ್ ದೇವಾಡಿಗ ಎನ್ನುವರ ಪತ್ನಿ ಸುಜಾತ(27) ಅವರು ತಾಯಿ‌ ಮಕ್ಕಳ‌ ಆಸ್ಪತ್ರೆಯಾಗಿರುವ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆ ಡಾ. ರಜನಿ ಎನ್ನುವರು ಸಾಮಾನ್ಯ ಹೆರಿಗೆ ಮಾಡಿಸಿದ್ದು ಬಾಣಂತಿಯು ಅತಿಯಾದ ರಕ್ತ ಸ್ರಾವದಿಂದ ಬಳಲಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ದ ಬಳಿಕ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನದ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಮೃತರಾಗಿದ್ದರು.

ಆಸ್ಪತ್ರೆಗೆ ದೌಡು…ವೈದ್ಯರ ವಿರುದ್ಧ ಆಕ್ರೋಷ…
ಸೋಮವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಸುಜಾತಾ ಕುಟುಂಬಿಕರು ಹಾಗೂ ದೇವಾಡಿಗ ಸಮಾಜ, ಜನಪ್ರತಿನಿಧಿಗಳು, ಮಹಿಳಾ ಪರ ಹೋರಾಟಗಾರರ ಸಹಿತ ನೂರಾರು ಸಂಖ್ಯೆಯಲ್ಲಿ ಜನರು ಕುಂದಾಪುರ ಸರಕಾರಿ ಆಸ್ಪತ್ರೆಯೆದುರು ಜಮಾಯಿಸಿದರು. ಸುಜಾತಾ ಕುಟುಂಬಿಕರು ಸಹಿತ ಪ್ರಮುಖ ಒಂದಷ್ಟು ಜನರನ್ನು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕಚೇರಿಗೆ ಕರೆದು ಅಲ್ಲಿಗೆ ವೈದ್ಯೆ ರಜನಿಯನ್ನು ಕರೆಸಲಾಯಿತು. ಮೊದಲಿಗೆ ಮಾತನಾಡಿದ ದೇವಾಡಿಗ ಸಮಾಜ ಮುಖಂಡ ಶಂಕರ್ ಅಂಕದಕಟ್ಟೆ, ಸುಜಾತಾ ತನ್ನ ಇಡೀ ಕುಟುಂಬವನ್ನು ನಿರ್ವಹಿಸುತ್ತಿದ್ದು ಅವರ ಈ ಸಾವಿನಿಂದ ಬಡ ಕುಟುಂಬ ಕಂಗೆಟ್ಟಿದ್ದು ಈ ಸಾವಿಗೆ ನ್ಯಾಯ ದೊರಕಬೇಕಿದೆ. ಯಾವುದೇ ಬಡ ಕುಟುಂಬಕ್ಕೂ ಇಂತಹ ಪರಿಸ್ಥಿತಿ ಆಗಬಾರದು. ವೈದ್ಯರು ದೇವರಾಗಿರಿ…ಯಾರನ್ನು ಕೊಲ್ಲಲೂ ಹೋಗಬೇಡಿ ಎಂದರು. ವೈದ್ಯರು ತಮ್ಮ ದಾಖಲೆ ಪತ್ರಗಳ ಪ್ರದರ್ಶನ ಮಾಡಿ ಸಬೂಬು ನೀಡಲು ಮುಂದಾದಾಗ ಅಲ್ಲಿದ್ದವರಿಂದ ಬಾರೀ ಆಕ್ರೋಷ ವ್ಯಕ್ತವಾಯಿತು. ಐದಾರು ಕೋಟಿಯ ಈ ಆಸ್ಪತ್ರೆಯಲ್ಲಿ ಇಂತಹ ಅವ್ಯವಸ್ಥೆ ಆಗಬಾರದು…ಸರಿಯಾದ ಸಮಯಕ್ಕೆ ವೈದ್ಯರು ಬರೋದೆ ಇಲ್ಲ. ಲಕ್ಷಗಟ್ಟಲೇ ಸಂಬಳ ಪಡೆದು ಸ್ವಂತ ಕ್ಲಿನಿಕ್ ನಡೆಸುತ್ತಾರೆ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ. ಹಣ ಮಾಡೊದೆ ಇಲ್ಲಿ ಕೆಲವರ ಕೆಲಸವಾಗಿಬಿಟ್ಟಿದೆ. ಈ ಬಗ್ಗೆ ಹೋರಾಟ ಅನಿವಾರ್ಯ ಎಂದು ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕಿಡಿಕಾರಿದ್ದಾರೆ.

ಹೋದ ಜೀವಕ್ಕೆ ಹೊಣೆ ಯಾರು?
ವೈದ್ಯರುಗಳು ಅವರಿಗೇನಾದರೂ ಸಮಸ್ಯೆಯಾದರೆ ಇಡೀ ರಾಜ್ಯಾದ್ಯಂತ ಆಸ್ಪತ್ರೆ ಬಂದ್ ಮಾಡಿ ಪ್ರತಿಭಟಿಸುತ್ತಾರೆ. ಆದರೆ ಒಬ್ಬ ಬಡ ಹೆಣ್ಣು ಮಗಳು ಸತ್ತರೆ ಅದಕ್ಕೆ ಇವರು ಕ್ಯಾರೇ ಮಾಡೋದಿಲ್ಲ. ಇವರಿಗೆ ಬಡವರ ಜೀವದ ಬಗ್ಗೆ ಕಾಳಜಿಯೇ ಇಲ್ಲ, ಬೇಜವಬ್ದಾರಿ ತನದ ಇಂತಹ ವರ್ತನೆಗೆ ಹೊಣೆ ಯಾರು? ಎಂದು ತಾಲೂಕು ಪಂಚಾಯತಿ ಸದಸ್ಯ ಜಗದೀಶ್ ದೇವಾಡಿಗ ಆಕ್ರೋಷ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಹಲವು ಬಾರಿ ಕೆಡಿಪಿ ಸಭೆಗಳಲ್ಲೂ ಈ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಮಾತನಾಡಿದರೂ ಯಾವುದೇ ಕ್ರಮವನ್ನು ಮೇಲಾಧಿಕಾರಿಗಳು ಕೈಗೊಳ್ಳುತ್ತಿಲ್ಲ. ಇಲ್ಲಿಗೆ ಬರುವ ಬಡ ರೋಗಿಗಳ ಕ್ಷೇಮದ ಬಗ್ಗೆ ಕಾಳಜಿಯಿಲ್ಲ. ಇದೊಂದು ಅವ್ಯವಸ್ಥಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ ಎಂದು ಗರಂ ಆದರು. ಈ ವೇಳೆ ಮಧ್ಯ ಪ್ರವೇಶಿಸಿದ ಕುಂದಾಪುರ ಪಿಎಸ್ಐ ಹರೀಶ್ ಆರ್. ಆದಂತಹ ಘಟನೆ ಬಗ್ಗೆ ಕುಳಿತು ಮಾತನಾಡಿ ಪರಿಹಾರ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.

ವೈದ್ಯೆ..ನೀನಾ ಅಲ್ಲ ನಾನಾ…?
ಸುಜಾತಾ ದೇವಾಡಿಗರ ಸಾವು ವೈದ್ಯರ ನಿರ್ಲಕ್ಷ್ಯದಿಂದ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೆರಿಗೆ ಹೊಟ್ಟೆ ನೋವಿನಿಂದ ಬಳಲಿ ಸಿಸೇರಿನ್ ಮಾಡಿ ಎಂದು ವೈದ್ಯೆ ಬಳಿ ಅಂಗಲಾಚಿದರೂ ‘ನಾನಾ ವೈದ್ಯೆ, ನೀನಾ’? ಎಂಬ ಉಡಾಫೆ ಉತ್ತರ ಕೊಟ್ಟ ವೈದ್ಯೆಯ ಬೇಜವಬ್ದಾರಿಯಿಂದಾಗಿ ಸುಜಾತಾ ಸಾವನ್ನಪ್ಪಿದ್ದಾರೆ. ಬಡ ಕುಟುಂಬದ ಈಕೆ ಸಾವಿಗೆ ನ್ಯಾಯ ಸಿಗಬೇಕು. ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಒಂದು ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಸುಜಾತಾ ಮೃತದೇಹ ಬಿಡಿಸಿಕೊಳ್ಳಲು ಸಾರ್ವಜನಿಕರು 50 ಸಾವಿರ ಒಟ್ಟುಹಾಕಿ ಕೊಡಬೇಕಾದ ಪರಿಸ್ಥಿತಿ ಬಂತು ಎಂದು ಮುಖಂಡ ಶಂಕರ್ ಅಂಕದಕಟ್ಟೆ ವಿವರಣೆ ನೀಡಿದರು. ಸುಜಾತಾ ಅವರದ್ದು ತೀರಾ ಬಡ ಕುಟುಂಬವಾಗಿದ್ದು ಇಡೀ ಮನೆ ಇದೀಗಾ ಕಂಗೆಟ್ಟಿದೆ. ಸರಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹವನ್ನೂ ಮಾಡಿದ್ದಾರೆ.

ಅಂದು ಆಗಿದ್ದೇನು?
ಸುಜಾತಾ ಹಾಗೂ ಸುಧೀರ್ ದೇವಾಡಿಗ‌ ಎನ್ನುವರಿಗೆ ವರ್ಷಗಳ ಹಿಂದೆ ವಿವಾಹವಾಗಿದ್ದು ಅವರು ಗರ್ಭಿಣಿಯಾದ ನಂತರ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿಯೇ ರೆಗ್ಯುಲರ್ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಸಾಮಾನ್ಯ ಹೆರಿಗೆ ಅಸಾಧ್ಯವೆಂದು ಸ್ಕ್ಯಾನಿಂಗ್ ವರದಿಯಲ್ಲಿದ್ದರೂ‌ ಕೂಡ ವೈದ್ಯೆ ಸಾಮಾನ್ಯ ಹೆರಿಗೆ ಆಗುವ ಭರವಸೆ ನೀಡಿದ್ದರೆಂದು ಕುಟುಂಬಿಕರು ಆಗ್ರಹಿಸಿದ್ದಾರೆ. ಡಿ.11ರಂದು ಹೆರಿಗೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರು. ಎರಡು ದಿನದ ಬಳಿಕ ಹೊಟ್ಟೆನೋವು ತಾಳಲಾರದೇ ಸಿಸೆರಿಯನ್ ಮಾಡಿಸಿ ಎಂದು ಗರ್ಭಿಣಿ ಸುಜಾತ ಪರಿಪರಿಯಾಗಿ ಕೇಳಿಕೊಂಡರೂ ಕೂಡಾ ವೈದ್ಯೆ ರಜನಿ ಎನ್ನುವವರು ನಿರ್ಲಕ್ಷ್ಯತೋರಿದ್ದು, ಸಾಮಾನ್ಯ ಹೆರಿಗೆ ಮಾಡುವ ಧೈರ್ಯ ನೀಡಿ ಹೆರಿಗೆ ಮಾಡಿಸಿದ್ದು, ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಬಾಣಂತಿಯು ವಿಪರೀತ ರಕ್ತಸ್ರಾವದಿಂದ ಅಸ್ವಸ್ಥರಾಗಿದ್ದು ಸುಜಾತ ಪ್ರಜ್ಞೆ ತಪ್ಪಿದ್ದಾರೆ.‌ಬಳಿಕ‌ ಸುಜಾತ‌ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತರಾಗಿದ್ದಾರೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.

ವೈದ್ಯರು ಹೇಳೋದು ಏನು?
ಸುಜಾತಾ ಡಿ.11ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು 14 ತಾರಿಖಿನಂದು ನನ್ನ ಕರ್ತವ್ಯ ಆರಂಭವಾಗಿತ್ತು. ನನ್ನ ಪರಿಶೀಲನೆಯಲ್ಲಿ ಎಲ್ಲವೂ ಸರಿಯಾಗಿತ್ತು. ಶನಿವಾರ (ಡಿ.14) 6.37ಕ್ಕೆ ಸಾಮಾನ್ಯ ಹೇರಿಗೆಯಾಗಿದ್ದು ಮಗು ಅತ್ತು 6.50 ರ ಸಮಯದಲ್ಲಿ ಕಸ ಹೊರಗೆ ಬಂತು. ಅದೇ ಸಮಯಕ್ಕೆ ಗರ್ಭಕೋಶವು ಕುಗ್ಗಬೇಕಿದ್ದು ಅದಾಗದೇ ರಕ್ತ ಸ್ರಾವ ಹೆಚ್ಚಾಗಿತ್ತು. ಯಾವುದೇ ಮಾತ್ರೆ, ಇಂಜೆಕ್ಷನ್ ಕೊಟ್ಟರೂ ಪರಿಸ್ಥಿತಿ ಸುಧಾರಿಸಿಲ್ಲ. ರಕ್ತ ಹೆಪ್ಪುಗಟ್ಟುವಿಕೆಯೂ ನಿಂತಾಗ ನಾವು ಬಾಣಂತಿಯನ್ನು ಈ ಬಗ್ಗೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಯೋಚನೆ ಮಾಡಿದೆವು. ಖುದ್ದು ನಾನು ಮತ್ತು ಇನ್ನೊಬ್ಬ ವೈದ್ಯರು, ಸಿಬ್ಬಂದಿಗಳು ಆಂಬುಲೆನ್ಸ್ ಮೂಲಕ ಮಣಿಪಾಲಕ್ಕೆ ತೆರಳಿದ್ದು ಅಲ್ಲಿ ರಾತ್ರಿ ಶಸ್ತ್ರಚಿಕಿತ್ಸೆ ನಡೆಸಿ ಸುಜಾತಾ ಅವರನ್ನು ಐ.ಸಿ.ಯು.ನಲ್ಲಿ ಇಟ್ಟಿದ್ದು ಭಾನುವಾರ ಮಧ್ಯಾಹ್ನ 12.30ಕ್ಕೆ ಆಕೆ ಮೃತಪಟ್ಟಿದ್ದನ್ನು ದ್ರಢೀಕರಿಸಿದ್ದಾರೆ. ಇದರಲ್ಲಿ ನಮ್ಮದೂ ತಪ್ಪಿಲ್ಲ. ನಾನು ಎಲ್ಲವನ್ನೂ ರೋಗಿ ಬಳಿಯೂ ಹೇಳಿದ್ದೆ. ಎಲ್ಲವೂ ಕೂಡ ದಾಖಲೆಯಾಗಿದೆ.– ಇದಿಷ್ಟು ಸರಕಾರಿ ಆಸ್ಪತ್ರೆ ವೈದ್ಯೆ ರಜನಿ ಹೇಳುವ ಸ್ಪಷ್ಟನೆ ಮಾತುಗಳು. ಇದನ್ನೇ ಕುಂದಾಪುರ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೊಬೆಲ್ಲೋ ಕೂಡ ಹೇಳುತ್ತಾರೆ.

ಲಕ್ಷಕ್ಕೊಂದು ಕೇಸ್ ಇದಂತೆ!
ಇಲ್ಲಿನ ವೈದ್ಯರುಗಳು ಹೇಳುವ ಪ್ರಕಾರ ಇದೊಂದು ಲಕ್ಷ ಜನರಲ್ಲಿ ಉಂಟಾಗುವ ಒಂದು ಪ್ರಕರಣವಂತೆ. ಇಂತಹ ಘಟನೆಯಲ್ಲಿ ರೋಗಿ ಬದುಕುವ ಸಾಧ್ಯತೆಗಳು ಇಲ್ಲ ಅನ್ನೋದು ಅವರ ಮಾತು. ಹಾಗಾದರೆ ರೋಗಿ ಮೊದಲೇ ಸಿಸೇರಿನ್ ಮಾಡಿ ಎಂದರೂ ಸಾಮಾನ್ಯ ಹೇರಿಗೆ ವೈದ್ಯರು ಮಾಡಿದ್ಯಾಕೆ ಅನ್ನೋದು ಇದೀಗ ಯಕ್ಷ ಪ್ರಶ್ನೆಯಾಗಿದೆ.

ಆರೋಗ್ಯ ಸಚಿವರೇ..
ಅಂದ ಹಾಗೇ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಟ್ಟಿಸಿಕೊಡಲ್ಪಟ್ಟ ಈ ಆಸ್ಪತ್ರೆ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಸರಕಾರದ ಆರೋಗ್ಯ ಮಂತ್ರಿ ಶ್ರೀರಾಮುಲು ಅವರಿಂದ ಉದ್ಘಾಟನೆಗೊಂಡಿತ್ತು. ಆರಂಭದಲ್ಲೇ ಅಸ್ಪತ್ರೆ ಕ್ಯಾಂಟಿನ್ ಸೇರಿದಂತೆ ಕೆಲವು ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪವಿತ್ತು ಎಂಬ ಕಾರಣಕ್ಕೆ ಇದು ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಇದೀಗಾ ಅದೇ ಆಸ್ಪತ್ರೆಯ ವೈದ್ಯೆಯಿಂದ ನಡೆದಿದೆ ಎನ್ನಲಾದ ಕರ್ತವ್ಯ ಲೋಪಕ್ಕೆ ಬಡ ಬಾಣಂತಿ ಬಲಿಯಾಗಿದ್ದಾರೆ. ಈ ಬಗ್ಗೆ ಸಚಿವರು ಗಮನಹರಿಸಬೇಕು. ಬಡ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ- 

ಕುಂದಾಪುರ ಸರಕಾರಿ ಆಸ್ಪತ್ರೆ ವೈದ್ಯೆ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಣಂತಿ?

Comments are closed.