ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ, ಅಗತ್ಯವಿರುವೆಡೆ ಸರ್ವೀಸ್ ರಸ್ತೆ ನಿರ್ಮಾಣ ಮೊದಲಾದ ಸೌಕರ್ಯ ನೀಡಿದ ಬಳಿಕವೇ ಟೋಲ್ ಸಂಗ್ರಹ ಮಾಡಬೇಕೆಂದು ಆಗ್ರಹಿಸಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ನೇತೃತ್ವದಲ್ಲಿ ಕಾಂಗ್ರೆಸ್ ಶನಿವಾರ ಹಮ್ಮಿಕೊಂಡ ಮರವಂತೆ- ಬೈಂದೂರು ಪಾದಯಾತ್ರೆಗೆ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್ ನಿರ್ಬಂಧಕಾಜ್ಞೆ ಹೊರಡಿಸಿ ಆದೇಶ ಹೊರಡಿಸಿದ್ದಾರೆ.

ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಮದನ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ, ಶೇಖರ್ ಪೂಜಾರಿ, ಗೌರಿ ದೇವಾಡಿಗ, ಮಂಜುಳಾ ಹಾಗೂ 300 ಮಂದಿ ಸಾರ್ವಜನಿಕರ ಒಗ್ಗೂಡುವಿಕೆಯಲ್ಲಿ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ ಬೈಂದೂರು ಬಸ್ ನಿಲ್ದಾಣ ಬಳಿ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂದಪಟ್ಟ ಗುತ್ತಿಗೆ ಕಂಪೆನಿ ಐ.ಆರ್.ಬಿ. ಗೆ ಮನವಿ ನೀಡಲು ಉದ್ದೇಶಿಸಲಾಗಿತ್ತು. ಈ ಸಂದರ್ಭ ಸಾರ್ವಜನಿಕರ ಸಂಚಾರ ವ್ಯವಸ್ತೆ, ಹಾಗೂ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನಿರ್ಬಂದಕಾಜ್ಞೆ ಹೊರಡಿಸುವಂತೆ ಜಿಲ್ಲಾ ಎಸ್ಪಿ ಅವರ ಕೋರಿಕೆ ಮೇಲೆ ಜಿಲ್ಲಾ ದಂಡಾಧಿಕಾರಿ ಈ ಆದೇಶ ನೀಡಿದ್ದಾರೆ.


ಪಾದಯಾತ್ರೆ ಸಂದರ್ಭದ ನಿಯಮವೇನು?
ಪಾದಯಾತ್ರೆ ನಡೆಯುವ ಸಂದರ್ಭ ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು, ಲಾಠಿ ಮತ್ತು ದೈಹಿಕ ಹಿಂಸೆಯಾಗುವ ಆಯುಧ ಬಳಸುವಂತಿಲ್ಲ. ಪಟಾಕಿ ಸಿಡಿಸುವುದು, ಸ್ಫೋಟಕ ಉಪಯೋಹಿಸುವಂತಿಲ್ಲ. ಯಾವುದೇ ವ್ಯಕ್ತಿ, ಶವದ ಆಕೃತಿ, ಪ್ರತಿಕೃತಿ ಪ್ರದರ್ಶನ ಮಾಡುವಂತಿಲ್ಲ. ಪ್ರಚೋದನಕಾರಿ, ಅವಹೇಳನಕಾರಿ ಘೋಷಣೆ ಕೂಗುವಂತಿಲ್ಲ. ಪಾದಯಾತ್ರೆ ಸಂದರ್ಭ ಪಾದಾಚಾರಿ ಮಾರ್ಗದಲ್ಲಿ ಸಂಚರಿಸಬೇಕು, ಯಾವುದೇ ವಾಹನಗಳ ಸಂಚಾರಕ್ಕೆ ತೊಡಕು ಮಾಡಬಾರದು ಮತ್ತು ರಸ್ತೆ ತಡೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.