
ಬೆಂಗಳೂರು (ನ.29): ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಅನರ್ಹಗೊಂಡ 17 ಶಾಸಕರು ಬಿಜೆಪಿ ಸೇರಿದ್ದಾರೆ. ಇವರಲ್ಲಿ ಅನೇಕರಿಗೆ ಟಿಕೆಟ್ ನೀಡಲಾಗಿದೆ. ಎಲ್ಲ ಅನರ್ಹ ಶಾಸಕರು ಈಗ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಅಚ್ಚರಿ ಎಂದರೆ, ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಬಿಜೆಪಿಗೆ ಜೈಕಾರ ಹಾಕುವ ಬದಲು ಕಾಂಗ್ರೆಸ್ ಪರ ಘೋಷಣೆ ಕೂಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹೌದು, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಗೋಕಾಕ್ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಕಾಂಗ್ರೆಸ್ ಪರ ಘೋಷಣೆ ಕೂಗಿದ್ದಾರೆ. ನಂತರ ಎಡವಟ್ಟು ಸರಿಪಡಿಸಿಕೊಂಡ ರಮೇಶ್ ಜಾರಕಿಹೊಳಿ, “ಕಳೆದ 20 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದು ಅಭ್ಯಾಸವಾಗಿದೆ. ಹಾಗಾಗಿ ಅಭ್ಯಾಸಬಲದಂತೆ ಹೀಗೆ ಹೇಳಿದ್ದೇನೆ,” ಎಂದು ತಪ್ಪನ್ನು ಸರಿಪಡಿಸಿಕೊಂಡರು.
ಇನ್ನು, ಎಂಟಿಬಿ ಕೂಡ ಇದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದಾರೆ. ಎಂಟಿಬಿ ಹೊಸಕೋಟೆಯಲ್ಲಿ ಪ್ರಚಾರ ನಡೆಸುತ್ತಿದ್ದರು. ಇನ್ನೇನು ಭಾಷಣ ಮುಗಿಸಬೇಕು ಎನ್ನುವಾಗ ಎಡವಟ್ಟೊಂದು ಸಂಭವಿಸಿತ್ತು. “ಅವರ ಬಾಯಿಂದ ಜೈ ಕರ್ನಾಟಕ, ಜೈ ಕಾಂಗ್ರೆಸ್” ಎನ್ನುವ ವಾಕ್ಯ ಉದುರಿತ್ತು. ನಂತರ ತಪ್ಪನ್ನು ಸರಿಪಡಿಸಿಕೊಂಡ ಎಂಟಿಬಿ ಕಾಂಗ್ರೆಸ್ ಅಲ್ಲ ಕ್ಷಮಿಸಿ ಬಿಜೆಪಿ ಎಂದರು.
ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗಿದೆ. “ನೋಡಿ ಅನರ್ಹರ ಬಾಯಿಂದ ಜೈ ಕಾಂಗ್ರೆಸ್, ಜೈ ಕಾಂಗ್ರೆಸ್ ಎನ್ನುವುದು ಎಷ್ಟು ಸ್ವಚ್ಛವಾಗಿ ಉದುರುತ್ತೆ ನೋಡಿ,” ಎಂದು ಕೆಲವರು ಟೀಕಿಸಿದ್ದಾರೆ.
Comments are closed.