
ಬೆಂಗಳೂರು: ಇತ್ತೀಚೆಗಷ್ಟೇ ಮಧ್ಯ ಪ್ರದೇಶದಲ್ಲಿ ನಡೆದ ದೇಶದಲ್ಲೇ ಅತೀ ದೊಡ್ಡ ಹನಿಟ್ರ್ಯಾಪ್ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿಯೂ ಅಂಥದೇ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಒಂದೆರಡು ವರ್ಷಗಳಲ್ಲಿ ಆರೇಳು ಮಂದಿ ಜನಪ್ರತಿನಿಧಿಗಳಿಂದ ಕೋಟಿಗಟ್ಟಲೆ ಹಣ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಮಾಜಿ ಸಚಿವರು, ಶಾಸಕರು ಯುವತಿಯರ ಜತೆ ಖಾಸಗಿಯಾಗಿರುವ ದೃಶ್ಯಗಳನ್ನು ಸೆರೆ ಹಿಡಿದು ಕೋಟ್ಯಂತರ ರೂ.ಗೆ ಬೇಡಿಕೆ ಇರಿಸಿದ್ದ ಯುವತಿಯರು ಸೇರಿ 8 ಮಂದಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ನಿವಾಸಿ ರಾಘವೇಂದ್ರ ಅಲಿಯಾಸ್ ರಘು ಮತ್ತು ಆತನ ಸ್ನೇಹಿತೆ, ವೈಟ್‌ಫೀಲ್ಡ್ ನಿವಾಸಿ ಯುವತಿ, ಇನ್ನೊಬ್ಬಳು ಯುವತಿ ಮತ್ತು ಉದಯ್, ಇತರ ನಾಲ್ವರು ಬಂಧಿತರು.
ಮೊಬೈಲ್ ಅಂಗಡಿ ಉದ್ಯೋಗಿಯಾಗಿದ್ದ ರಾಘವೇಂದ್ರ ಅಲ್ಲಿ ಸೈಬರ್ ಕ್ರೈಂ ಬಗೆಗೆ ತಿಳಿದುಕೊಂಡು ಹನಿಟ್ರ್ಯಾಪ್ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದಿಸಬಹುದು ಎಂದು ತೀರ್ಮಾನಿಸಿದ್ದ. ಈ ವಿಚಾರವನ್ನು ಸ್ನೇಹಿತೆಗೆ ತಿಳಿಸಿ ಸಹಕಾರ ಕೋರಿದ್ದ. ಇವರಿಬ್ಬರು ಅನಂತರ ತಮ್ಮ ಜಾಲ ವಿಸ್ತರಿಸಿಕೊಳ್ಳಲು ವೇಶ್ಯಾವಾಟಿಕೆ ದಂಧೆ ನಡೆಸುವ ವ್ಯಕ್ತಿಯನ್ನು ಪರಿಚಯಿಸಿಕೊಂಡು ತಮ್ಮ ಅವ್ಯವಹಾರಕ್ಕೆ ಬೆಲೆವೆಣ್ಣುಗಳನ್ನು ಬಳಸಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಜನಪ್ರತಿನಿಧಿಗಳಿಗೆ ಹತ್ತಿರ
ಆರಂಭದಲ್ಲಿ ಕಷ್ಟಗಳನ್ನು ಹೇಳಿಕೊಂಡು ಜನಪ್ರತಿನಿಧಿಗಳ ಬಳಿ ಹೋಗುತ್ತಿದ್ದ ರಾಘವೇಂದ್ರ ಮತ್ತಾತನ ಸ್ನೇಹಿತೆ ಅನಂತರ ಅವರ ಸ್ನೇಹ ಬೆಳೆಸು ತ್ತಿದ್ದರು. ನಾನಾ ಸ್ಥಳಗಳಲ್ಲಿ ಅವರನ್ನು ಪದೇ ಪದೇ ಭೇಟಿ ಯಾಗುತ್ತಿದ್ದರು. ತೀರಾ ಆತ್ಮೀಯರಾಗುತ್ತಿದ್ದ ನಾಯಕರನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.
ಅನಂತರ ಕೆಲವು ಕಾಲ್‌ಗರ್ಲ್ಗಳನ್ನು ಸಂಪರ್ಕಿಸಿ, ದಂಧೆಗೆ ಬಳಸಿಕೊಳ್ಳುತ್ತಿದ್ದರು. ಯುವತಿಯರ ಜತೆ ಖಾಸಗಿ ಸಮಯ ಕಳೆಯಲು ಬಯಸುವ ನಾಯಕರಿಗೆ ಹೋಟೆಲ್ ಕಾಯ್ದಿರಿಸುತ್ತಿದ್ದರು. ರಹಸ್ಯ ಕೆಮರಾಗಳ ಮೂಲಕ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಹಣಕ್ಕಾಗಿ ಬೇಡಿಕೆ ಮಂಡಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
25 ಕೋ.ರೂ.ಗೆ ಬೇಡಿಕೆ ಇರಿಸಿ ಬಲೆಗೆ ಬಿದ್ದರು!
ಆರೋಪಿಗಳು ಒಂದೆರಡು ವರ್ಷಗಳಿಂದ ಇದೇ ದಂಧೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಮಧ್ಯೆ ಮಾಜಿ ಸಚಿವರೊಬ್ಬರ ಖಾಸಗಿ ದೃಶ್ಯವನ್ನು ಸೆರೆ ಹಿಡಿದಿದ್ದ ರಾಘವೇಂದ್ರನ ಸ್ನೇಹಿತೆ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು.
ರಾಘವೇಂದ್ರ ಜತೆ ಸೇರಿಕೊಂಡು 25 ಕೋ.ರೂ.ಗೆ ಬೇಡಿಕೆ ಇಟ್ಟಿದ್ದಳು. ಕೊನೆಗೆ 10 ಕೋ.ರೂ.ಗೆ ಕೊಡುವಂತೆ ಹೇಳಿ, ಲಕ್ಷಾಂತರ ರೂ. ಹಣ ಪಡೆದಿದ್ದರು. ಆದರೆ ನಿರಂತರ ಬ್ಲಾಕ್‌ಮೇಲ್‌ಗೆ ವಿಚಲಿತಗೊಂಡ ಆ ಮಾಜಿ ಸಚಿವರು, ಸದ್ಯ ರಾಜ್ಯದಲ್ಲಿ ಪ್ರಭಾವಿ ಖಾತೆ ಹೊಂದಿರುವ ಸಚಿವರೊಬ್ಬರ ಸಹಾಯ ಕೋರಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಹಾಲಿ ಸಚಿವರು ಆರೋಪಿಗಳ ಬಂಧನಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೇಳು ದಿನಗಳಿಂದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಸೆ. 23ರಂದು ರಾಘವೇಂದ್ರನ ಗೆಳತಿ ಮತ್ತು ವೇಶ್ಯಾವಾಟಿಕೆ ದಂಧೆ ನಡೆಸುವ ವ್ಯಕ್ತಿಯನ್ನು ಬಂಧಿಸಿದ್ದರು. ಮಂಗಳವಾರ ರಾತ್ರಿ ದಾವಣಗೆರೆಯಲ್ಲಿ ರಾಘವೇಂದ್ರ ಮತ್ತು ಮತ್ತೂಬ್ಬ ಯುವತಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಪೊಲೀಸರಿಂದಲೇ ಮಾತುಕತೆ
ಕಾರ್ಯಾಚರಣೆಗಿಳಿದ ಪೊಲೀಸರು ಆರಂಭದಲ್ಲಿ ಆರೋಪಿ ರಾಘವೇಂದ್ರನನ್ನು ಸಂಪರ್ಕಿಸಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮನವಿ ಮಾಡಿದ್ದರು. ಆದರೂ ರಾಘವೇಂದ್ರ ವಿಡಿಯೋವನ್ನು ಗದಗ ಜಿಲ್ಲೆಯ ತಾಲೂಕಿನ ಉದಯ ಎಂಬಾತನ ಮೂಲಕ ಹರಿಯಬಿಟ್ಟು ಬಳಿಕ ತಲೆಮರೆಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಜೈಲಿಗೆ ಹೋಗಿದ್ದ ಆರೋಪಿ
ಆರೋಪಿ ರಾಘವೇಂದ್ರ ಹನಿಟ್ರ್ಯಾಪ್ ದಂಧೆ ಮೂಲಕ ಲಕ್ಷಾಂತರ ರೂ. ಸಂಪಾದನೆ ಮಾಡಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕನ್ನಡಕದಲ್ಲಿ ರಹಸ್ಯ ಕೆಮರಾ
ಜನಪ್ರತಿನಿಧಿಗಳ ಜತೆ ಖಾಸಗಿ ಸಮಯ ಕಳೆಯಲು ಕಳುಹಿಸುತ್ತಿದ್ದ ಯುವತಿಯರು ಧರಿಸುವ ಕನ್ನಡಕ ಮತ್ತು ಕೊಂಡೊಯ್ಯುವ ವ್ಯಾನಿಟಿ ಬ್ಯಾಗ್‌ನಲ್ಲಿ ರಹಸ್ಯ ಕೆಮರಾ ಅಳವಡಿಸಿ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿತ್ತು. ಅನಂತರ ಪೆನ್‌ಡ್ರೈವ್‌ನಲ್ಲಿ ಹಾಕಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
Comments are closed.