ಮಂಗಳೂರು,ನ.23: ಪ್ರಸಿದ್ಧ ಯಕ್ಷಗಾನ ಭಾಗವತ ಪಟ್ಲ ಸತೀಶ ಶೆಟ್ಟಿ ಅವರನ್ನು ಯಕ್ಷಗಾನ ಪ್ರಸಂಗ ನಡೆಯುತ್ತಿದ್ದ ಸಂದರ್ಭದಲ್ಲಿ ವ್ಯವಸ್ಥಾಪಕರು ಅರ್ಧದಲ್ಲೇ ಎಬ್ಬಿಸಿ ಹೊರಕ್ಕೆ ಕಳುಹಿಸಿದ ಘಟನೆ ನಿನ್ನೆ ರಾತ್ರಿ ಕಟೀಲು ದೇವಳದ ಆವರಣದಲ್ಲಿ ನಡೆದಿದೆ. ವ್ಯವಸ್ಥಾಪಕರ ಈ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಟೀಲು ಮೇಳದ ತಿರುಗಾಟ ಆರಂಭ ಹಿನ್ನೆಲೆಯಲ್ಲಿ ನಿನ್ನೆ ದೇಗುಲ ಆವರಣದಲ್ಲಿ ಯಕ್ಷಗಾನ ಏರ್ಪಡಿಸಲಾಗಿತ್ತು. ಹೈಕೋರ್ಟ್ ಮೆಟ್ಟಿಲೇರಿದ್ದ ಮೇಳದ ಆಡಳಿತ ಮತ್ತು ಕಲಾವಿದರ ಜಟಾಪಟಿಯಿಂದಾಗಿ ಪಟ್ಲ ಸತೀಶ್ ಶೆಟ್ಟಿಯವರ ವಿರುದ್ಧ ಅಸ್ರಣ್ಣ ಕುಟುಂಬ ಮತ್ತು ಮೇಳದ ವ್ಯವಸ್ಥಾಪಕರು ಗರಂ ಆಗಿದ್ದರು. ಎರಡು ದಿನಗಳ ಹಿಂದಷ್ಟೇ ದೇವಸ್ಥಾನದ ಪರವಾಗಿ ಕೋರ್ಟ್ ಮಧ್ಯಂತರ ಆದೇಶ ನೀಡಿದ್ದು ಸದ್ಯ ವ್ಯವಸ್ಥಾಪಕರೇ ಕಟೀಲು ಮೇಳವನ್ನು ಮುನ್ನಡೆಸುವಂತೆ ಹೇಳಿತ್ತು.
ಪಟ್ಲ ಸತೀಶ ಶೆಟ್ಟಿ ಕಲಾವಿದರ ಪರ ಇದ್ದಾರೆ ಎಂಬ ಕಾರಣಕ್ಕೆ ಯಕ್ಷಗಾನ ನಡೆಯುತ್ತಿರುವಾಗಲೇ ಅವಮಾನಿಸಿ ಹೊರಕಳಿಸಿದ್ದಾರೆ ಎನ್ನಲಾಗುತ್ತಿದೆ. ಆಸ್ರಣ್ಣ ಕುಟುಂಬಸ್ಥರು ಮತ್ತು ಆಡಳಿತ ವರ್ಗದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಲಾವಿದರಿಗೆ ವೇತನ ನೀಡದೆ ಅನ್ಯಾಯ ಮಾಡಿರುವ ಬಗ್ಗೆ ಕೋರ್ಟ್ ವ್ಯಾಜ್ಯ ನಡೆಯುತ್ತಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ಕಟೀಲು ದೇವಸ್ಥಾನ ಆರು ಮೇಳಗಳನ್ನು ಹೊಂದಿದೆ. ಇದರಲ್ಲಿ ಪಟ್ಲ ಭಾಗವತರಿಗೆ ಭಾರೀ ಡಿಮ್ಯಾಂಡ್ ಇದ್ದು, ಸಮಾಜಪರ ಯಕ್ಷಗಾನ ಕಲಾವಿದರ ಪರ ಹೋರಾಟದಲ್ಲಿ ಪಟ್ಲರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ `ಯಕ್ಷಧ್ರುವ’ ಪಟ್ಲ ಫೌಂಡೇಶನ್ ಮೂಲಕ ಅನೇಕ ಮಂದಿ ಅಶಕ್ತ ಯಕ್ಷಗಾನ ಕಲಾವಿದರಿಗೆ ನೆರವಾಗುತ್ತಿದ್ದಾರೆ.

Comments are closed.