
ಹೈದರಾಬಾದ್: ಕಂಪನಿ ತನ್ನನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗುತ್ತಿರುವುದನ್ನು ಕಂಡು ಖಿನ್ನತೆಗೆ ಜಾರಿದ್ದ ಮಹಿಳಾ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹರಿಣಿ(24) ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಎರಡು ವರ್ಷದಿಂದ ಐಟಿ ಕಂಪನಿಯಲ್ಲಿ ಜೂನಿಯರ್ ಸಾಫ್ಟ್‌ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರಿಣಿ ಹಾಸ್ಟೆಲ್ ಕೊಠಡಿಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಂಪನಿ ಕೆಲಸದಿಂದ ತೆಗೆದು ಹಾಕಲಿರುವ ಉದ್ಯೋಗಿಗಳ ಪಟ್ಟಿಯನ್ನು ಮಾಡಿತ್ತು. ಈ ಪಟ್ಟಿಯಲ್ಲಿ ಹೆಸರು ದಾಖಲಾಗಿದ್ದರಿಂದ ಹರಿಣಿ ಮಾನಸಿಕ ಖಿನ್ನತೆಗೆ ಜಾರಿದ್ದಳು. ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಳು.
ತನ್ನನ್ನು ಕಂಪನಿ ಕೆಲಸದಿಂದ ತೆಗೆದು ಹಾಕುತ್ತಿರುವ ವಿಚಾರವನ್ನು ತಂದೆ ಮತ್ತು ಸಹೋದರನ ಜೊತೆ ಹರಿಣಿ ಹಂಚಿಕೊಂಡಿದ್ದಳು. ಕೆಲ ದಿನಗಳ ಹಿಂದೆ ಕಂಪನಿ ನೋಟಿಸ್ ನೀಡಿದ್ದನ್ನು ಕಂಡು ಅಸಮಾಧಾನಗೊಂಡಿದ್ದಳು. ಹರಿಣಿ ಬೇಸರದಲ್ಲಿರುವುದನ್ನು ಕಂಡು ಮನೆಯವರು ಸಮಾಧಾನಪಡಿಸಿದ್ದರೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಮರಣ ಪತ್ರ ಸಿಕ್ಕಿದ್ದು ಇದರಲ್ಲಿ ತನ್ನ ಅಂಗಾಂಗಳನ್ನು ದಾನ ಮಾಡುವಂತೆ ಕುಟುಂಬ ಸದಸ್ಯರಲ್ಲಿ ಕೇಳಿಕೊಂಡಿದ್ದಾಳೆ.
ಐಪಿಸಿ ಸೆಕ್ಷನ್ 174(ಅಸಹಜ ಸಾವು) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ತನಿಖೆ ಆರಂಭಗೊಂಡಿದೆ.
Comments are closed.