
ಮನೀಲಾ:ಅಪಾಯಕಾರಿ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡದೆ 15 ವರ್ಷದ ಬಾಲಕ ನದಿಯ ದಡದಲ್ಲಿ ಮೊಸಳೆ ಬಾಯಿ ಸೇರುತ್ತಿದ್ದ ತಂಗಿಯನ್ನು ರಕ್ಷಿಸಿದ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.
ಫಿಲಿಪೈನ್ಸ್ ನ ಪಾಲ್ವಾನ್ ನದಿಯನ್ನು 15ರ ಹರೆಯದ ಹಾಸೀಂ ಹಾಗೂ 12 ವರ್ಷದ ಹೈನಾ ಲಿಸಾ ಜೋಸೆ ಹಾಬಿ ಬಿದಿರನ್ನು ಜೋಡಿಸಿ ತಯಾರಿಸಿದ್ದ ಪಟ್ಟಿಯ ಮೂಲಕ ನದಿ ದಾಟುತ್ತಿದ್ದರು. ಏತನ್ಮಧ್ಯೆ ದಡ ಸಮೀಪಿಸುತ್ತಿದ್ದ ಸಂದರ್ಭದಲ್ಲಿ 14 ಅಡಿ ಉದ್ದದ ಮೊಸಳೆಯೊಂದು ಹೈನಾಳ ಕಾಲಿಗೆ ಬಾಯಿ ಹಾಕಿ ಹಿಡಿದುಬಿಟ್ಟಿತ್ತು.
ಭಯದಿಂದ ತಂಗಿ ಕೂಗತೊಡಗಿದ್ದಳು..ಮೊಸಳೆ ಬಾಯಿಯಿಂದ ತನ್ನ ಬಲ ಕಾಲನ್ನು ಎಳೆಯಲು ಪ್ರಯತ್ನಿಸುತ್ತಿದ್ದಳು. ಕೂಡಲೇ ಅಣ್ಣ ದಡದಲ್ಲಿದ್ದ ಕಲ್ಲುಗಳನ್ನು ಮೊಸಳೆ ಬಾಯಿಯೊಳಗೆ ಎಸೆಯತೊಡಗಿದ್ದ. ಕಲ್ಲುಗಳಿಂದಾಗಿ ಮೊಸಳೆಗೆ ಬಾಲಕಿಯನ್ನು ನುಂಗಲು ಅಡ್ಡಿಯಾಗಿತ್ತು. ಆಗ ಹಾಸೀಂ ಧೈರ್ಯ ಮಾಡಿ ಮೊಸಳೆ ಬಾಯಿಂದ ತಂಗಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದ ಎಂದು ದ ಡೈಲಿ ಮೇಲ್ ವರದಿ ಮಾಡಿದೆ.
ಆದರೆ ತಂಗಿಯ ಬಲಕಾಲಿಗೆ ಆಳವಾದ ಗಾಯವಾಗಿತ್ತು. ನಂತರ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಆರೋಗ್ಯ ಸ್ಥಿರವಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಘಟನೆ ಬಗ್ಗೆ ಪೊಲೀಸರು ಬಾಲಾಬಕ್ ಮುನ್ಸಿಪಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ನದಿಯಲ್ಲಿ ಮೊಸಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Comments are closed.