ಕರ್ನಾಟಕ

ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಯೂ ಸೇಫ್, ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸ್ಥಾನವೂ ಗಟ್ಟಿ: ದೇವೇಗೌಡ

Pinterest LinkedIn Tumblr


ಬೆಂಗಳೂರು: ಅನರ್ಹತೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನಿಂದ ಮುಂದಿನ ಮೂರೂಕಾಲು ವರ್ಷ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿಯೂ ಸೇಫ್, ಸಿದ್ದರಾಮಯ್ಯ ಅವರ ಪ್ರತಿಪಕ್ಷ ನಾಯಕ ಸ್ಥಾನವೂ ಗಟ್ಟಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನರ್ಹತೆ ಎತ್ತಿ ಹಿಡಿದು ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಯಡಿಯೂರಪ್ಪ ಅವರಿಗೆ ತಕ್ಷಣ ಎಲ್ಲರನ್ನು ಮಂತ್ರಿ ಮಾಡುವ ಕಷ್ಟ ತಪ್ಪಿದೆ. ಸಿದ್ದರಾಮಯ್ಯ ಅವರೂ ಎಷ್ಟು ಗೆದ್ದರೂ ಪ್ರತಿಪಕ್ಷ ಸ್ಥಾನದಲ್ಲಿ ಇರಲು ಅಡ್ಡಿ ಇಲ್ಲದಂತಾಗಿದೆ ಎಂದು ಸೂಕ್ಷ್ಮವಾಗಿ ತಿಳಿಸಿದರು.

ಸುಪ್ರೀಂಕೋರ್ಟ್‌ ತೀರ್ಪು ಹಾಗೂ ಉಪ ಚುನಾವಣೆ ಬಗ್ಗೆ ನಾನೇನೂ ದೊಡ್ಡದಾಗಿ ವಿಶ್ಲೇಷಣೆ ಮಾಡಲ್ಲ. ಮೂರೂಕಾಲು ವರ್ಷ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಹೀಗೇ ಇರಲಿ. ನನಗೆ ಪಕ್ಷ ಸಂಘಟನೆಗೆ ಸಮಯ ಸಿಕ್ಕಿದಂತಾಗುತ್ತದೆ. ಎಷ್ಟಾದರೂ ಗೆದ್ದುಕೊಳ್ಳಲಿ. ನಮ್ಮ ಶಕ್ತಿ ಇರುವಷ್ಟು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಜೆಡಿಎಸ್‌ನ ಸೆಕ್ಯುಲರ್‌ ಕ್ರೆಡಿಬಲ್‌ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು? ಎಲ್ಲಿಂದ ಬಂದ ಎಂದು ಏಕವಚನದಲ್ಲೇ ಮಾತನಾಡಿದ ಅವರು, ಹಾಸನದಲ್ಲಿ ಬಿಜೆಪಿ ಬಿ ಟೀಂ ಎಂದು ರಾಹುಲ್‌ಗಾಂಧಿಗೆ ಹೇಳಿದ್ದು ಯಾರು? ಎಂದು ಪ್ರಶ್ನಿಸಿದರು.

ರಾಹುಲ್‌ಗಾಂಧಿಯವರು ಜೆಡಿಎಸ್‌ ಬಿ ಟೀಂ ಎಂದ ಮೇಲೆ ಆಗಿರುವ ಡ್ಯಾಮೇಜ್‌ ಸರಿಪಡಿಸಿಕೊಂಡು ಮತ್ತೆ ನನ್ನ ಶಕ್ತಿ ತೋರಿಸುತ್ತೇನೆ. ಜೆಡಿಎಸ್‌ ಎಷ್ಟು ಸೆಕ್ಯುಲರ್‌ ಎಂಬುದು ಸಾಬೀತುಪಡಿಸುತ್ತೇನೆ. ನನ್ನ ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿದಾಗ ಜೆಡಿಎಸ್‌ ಸೆಕ್ಯುಲರ್‌ ಇದೀಗ ಅಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಕರುಣಾನಿಧಿಯವರು ಆರು ವರ್ಷ ಬಿಜೆಪಿ ಜತೆ ಸೇರಿ ಕೇಂದ್ರದಲ್ಲಿ ಸರ್ಕಾರ ಮಾಡಿದ ನಂತರ ಮತ್ತೆ ಕಾಂಗ್ರೆಸ್‌ ಅವರ ಮನೆ ಬಾಗಿಲಿಗೆ ಮೈತ್ರಿಗೆ ಹೋಗಿಲ್ಲವಾ? ಇದು ಸಿದ್ದರಾಮಯ್ಯಗೆ ಗೊತ್ತಿಲ್ಲವಾ? ಎಂದರು.
ಸುಪ್ರೀಂಕೋರ್ಟ್‌ ತೀರ್ಪು ಬಂದ ನಂತರ ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದ್ಯಾಗೋ ನನಗೆ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಉಪ ಚುನಾವಣೆಯಲ್ಲಿ ಜೆಡಿಎಸ್‌ ಎಲ್ಲ ಕಡೆ ಸ್ಪರ್ಧೆ ಮಾಡಲಿದೆ. ಗೆಲುವು-ಸೋಲು ಬೇರೆ. ಆದರೆ, ನಮ್ಮ ಶ್ರಮ ನಾವು ಹಾಕುತ್ತೇವೆ. ನಾವು ಚುನಾವಣೆಯನ್ನು ಗಂಭೀರವಾಗಿಯೇ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಜಫ್ರುಲ್ಲಾ ಖಾನ್‌, ನಗರ ಘಟಕದ ಅಧ್ಯಕ್ಷ ಪ್ರಕಾಶ್‌ ಉಪಸ್ಥಿತರಿದ್ದರು.

Comments are closed.