
ಮಂಡ್ಯ: ಅನರ್ಹ ಶಾಸಕ ನಾರಾಯಣ ಗೌಡ ತಮ್ಮ ರಾಜೀನಾಮೆ ಸೀಕ್ರೆಟನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಯಾಕೆ ನೀಡಿದೆ ಎಂಬುವುದಕ್ಕೆ ಕಾರಣ ನೀಡಿದ ಅವರು, ನಾನು ಕೆ ಆರ್ ಪೇಟೆ ತಾಲೂಕಿನ ಅಭಿವೃದ್ದಿಗೆ 700 ಕೋಟಿ ಅನುದಾನ ಕೇಳಿದ್ದೆ ಆದರೆ ಬಿಎಸ್ ಯಡಿಯೂರಪ್ಪನವರು ಸಾವಿರ ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಈ ಕಾರಣಕ್ಕಾಗಿಯೇ ರಾಜೀನಾಮೆ ನೀಡಿದೆ ಎಂದಿದ್ದಾರೆ.
ಅನರ್ಹ ಶಾಸಕರ ಕುರಿತಾಗಿ ಬಿ ಎಸ್ ಯಡಿಯೂರಪ್ಪ ಆಡಿಯೋ ಲೀಕ್ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ನಾರಾಯಣ ಗೌಡ ಈ ಹೇಳಿಕೆ ಕುತೂಹಲ ಕೆರಳಿಸಿದೆ. ಮಂಡ್ಯದ ಬೂಕನಕೆರೆಯಲ್ಲಿ ಮಾತನಾಡಿದ ಅವರು, ಒಂದು ದಿನ ಸಂಜೆ ನನ್ನನ್ನು ಕೆಲವರು ಬಿಎಸ್ ಯಡಿಯೂರಪ್ಪ ಮನೆಗೆ ಕರೆದುಕೊಂಡು ಹೋದರು. ಈ ವೇಳೆ ಮಾತನಾಡಿದ ಬಿಎಸ್‌ವೈ, ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ. ನೀನು ಕೈ ಜೋಡಿಸಿದರೆ ತಾಲೂಕಿನ ಅಭಿವೃದ್ದಿ ಮಾಡೋಣ ಎಂದರು.
ಈ ವೇಳೆ ನಾನು ಬಿಎಸ್ ಯಡಿಯೂರಪ್ಪ ಬಳಿ ತಾಲೂಕಿನ ಅಭಿವೃದ್ದಿಗಾಗಿ 700 ಕೋಟಿ ಅನುದಾನ ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಒಂದು ಸಾವಿರ ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಈ ಕಾರಣಕ್ಕಾಗಿ ರಾಜೀನಾಮೆ ನೀಡಿ ಬಿಎಸ್‌ವೈ ಜೊತೆಗೆ ಕೈ ಜೋಡಿಸಿದೆ ಎಂದಿದ್ದಾರೆ.
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೆ ಆರ್ ಪೇಟೆಗೆ ಮಂಜೂರಾದ ಅನುದಾನ ಹಾಸನಕ್ಕೆ ಹೋಗುತ್ತಿತ್ತು ಎಂದು ಆರೋಪಿಸಿದ ಅವರು, ಬಿಎಸ್‌ವೈ ನೀಡಿದ ಭರವಸೆಯಂತೆ ಇದೀಗ 221 ಕೋಟಿ ಅನುದಾನ ಬಂದಿದೆ. ಹಂತ ಹಂತವಾಗಿ ಮತ್ತಷ್ಟು ಅನುದಾನ ಕ್ಷೇತ್ರಕ್ಕೆ ಬರುತ್ತದೆ ಎಂದರು.
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಉಲ್ಟಾ ಹೊಡೆದಿರುವ ಅನರ್ಹ ಶಾಸಕ ನಾರಾಯಣ ಗೌಡ, ಅನುದಾನದ ಮಾತುಕತೆ ರಾಜೀನಾಮೆಗೆ ಮುನ್ನ ನಡೆದಿದ್ದಲ್ಲ ಬದಲಾಗಿ ರಾಜೀನಾಮೆ ಬಳಿಕ ಮಾತುಕತೆ ನಡೆಸಿರುವುದಾಗಿ ಸಮರ್ಥನೆ ನೀಡಿದರು.
Comments are closed.