
ನವದೆಹಲಿ: ವಿಶ್ವದಲ್ಲೇ ಅತಿಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಈ ಬಾರಿ ಈರುಳ್ಳಿ ಬೆಳೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಬೆಲೆಯೂ ಗಗನಕ್ಕೇರುತ್ತಿದೆ. ಇದೀಗ ಭಾರತದಿಂದ ಹೊರದೇಶಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ನಿರ್ಬಂಧಿಸಲಾಗಿದೆ.
ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆಗೂ ಅನಿವಾರ್ಯವಾಗಿರುವ ಈರುಳ್ಳಿ ಬೆಲೆ 80 ರೂ. ದಾಟಿದೆ. ಇದರಿಂದ ಗ್ರಾಹಕರು ಈರುಳ್ಳಿ ಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಇನ್ನೂ ಕೆಲವೆಡೆ ದುಬಾರಿ ಮೊತ್ತ ಕೊಟ್ಟು ಈರುಳ್ಳಿ ಖರೀದಿಸಲು ಗ್ರಾಹಕರು ಸಿದ್ಧರಿದ್ದರೂ ಈರುಳ್ಳಿಯೇ ಸಿಗುತ್ತಿಲ್ಲ. ಹೀಗಾಗಿ, ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತು ವ್ಯಾಪಾರವನ್ನು ನಿರ್ಬಂಧಿಸಿದ ಆದೇಶ ಹೊರಡಿಸಿದೆ.
ಈ ಕೂಡಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತು ವ್ಯಾಪಾರವನ್ನು ಸ್ಥಗಿತಗೊಳಿಸಿರುವುದಾಗಿ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಇಲಾಖೆ ಆದೇಶ ಹೊರಡಿಸಿದೆ. ಕಳೆದ ವಾರ ಒಂದು ಕೆ.ಜಿ.ಗೆ 70ರಿಂದ 80 ರೂ.ನಂತೆ ಈರುಳ್ಳಿ ಮಾರಾಟವಾಗುತ್ತಿತ್ತು. ಇದೀಗ ಇನ್ನೂ ಹೆಚ್ಚಳವಾಗುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ.
ಗ್ರಾಹಕರ ಮೇಲಿನ ಈರುಳ್ಳಿ ಬೆಲೆಯ ಹೊರೆಯನ್ನು ಇಳಿಸುವ ಸಲುವಾಗಿ ದೇಶದೆಲ್ಲೆಡೆ ಒಟ್ಟು 50 ಸಾವಿರ ಟನ್ಗೂ ಹೆಚ್ಚು ಟನ್ ಈರುಳ್ಳಿಗಳನ್ನು ಕೇಂದ್ರ ಸರ್ಕಾರ ಸರಬರಾಜು ಮಾಡುತ್ತಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ಬಾರಿ ಭಾರೀ ಪ್ರವಾಹ ಉಂಟಾಗಿ ಈರುಳ್ಳಿ ಬೆಳೆ ಕೊಳೆತುಹೋಗಿದ್ದ ಕಾರಣದಿಂದ ಈರುಳ್ಳಿ ಬೆಳೆಯಲ್ಲಿ ತೀವ್ರ ಇಳಿಕೆಯಾಗಿದೆ.
ಯುರೋಪ್ನ ಭೂತಾನ್, ಶ್ರೀಲಂಕಾ, ನೇಪಾಳ ಮುಂತಾದ ದೇಶಗಳಿಗೆ ಭಾರತದ ಈರುಳ್ಳಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾಗುತ್ತದೆ. ಆದರೆ, ಇದೀಗ ರಫ್ತು ನಿಲ್ಲಿಸಿರುವುದರಿಂದ ಬೇರೆ ದೇಶಗಳಲ್ಲೂ ಈರುಳ್ಳಿ ಸಮಸ್ಯೆ ತಲೆದೋರಲಿದೆ.
ಈರುಳ್ಳಿ ಬಳಕೆ ಮಾತ್ರವಲ್ಲ ಈರುಳ್ಳಿ ಕೃಷಿಯಲ್ಲೂ ಭಾರತ ಚೀನಾದ ನಂತರದ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿವರ್ಷ 15,118 ಮೆಟ್ರಿಕ್ ಟನ್ ನಷ್ಟು ಈರುಳ್ಳಿ ಬೆಳೆಯಲಾಗುತ್ತದೆ. ಅಂದರೆ ವಿಶ್ವದ ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.19.90 ರಷ್ಟು. ಈ ಪೈಕಿ ಭಾರತದಲ್ಲೇ ಅತಿಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ಮಹಾರಾಷ್ಟ್ರದಲ್ಲಿ ವರ್ಷಕ್ಕೆ 4,905 ಟನ್ ಈರುಳ್ಳಿ ಬೆಳೆದರೆ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 2,592.2 ಟನ್ ಬೆಳೆಯಲಾಗುತ್ತದೆ. ಇಲ್ಲಿನ ಗುಣಮಟ್ಟದ ಈರುಳ್ಳಿಗೆ ದೇಶ-ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇದ್ದು, ಅಪಾರ ಪ್ರಮಾಣದ ಈರುಳ್ಳಿಯನ್ನು ಯುರೋಪ್ ಹಾಗೂ ಅಮೆರಿಕಾಗೆ ರಫ್ತು ಮಾಡಲಾಗುತ್ತದೆ.
ಆದರೆ, ಈ ಎರಡೂ ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶೇ.60ರಷ್ಟು ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಿದೆ. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆ ಹಾಗೂ ಪೂರೈಕೆ ನಡುವಿನ ವ್ಯತ್ಯಯದಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಲೇ ಇದೆ.
ಪ್ರಸ್ತುತ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಅತಿವೃಷ್ಟಿಗೆ ಸಿಲುಕಿ ನರಳುತ್ತಿರುವಂತೆಯೇ 2010ರಲ್ಲೂ ಸಹ ರಣಭೀಕರ ಮಳೆ ಈ ಎರಡೂ ರಾಜ್ಯವನ್ನು ಇನ್ನಿಲ್ಲದಂತೆ ಕಾಡಿತ್ತು. ಈರುಳ್ಳಿ ಕಟಾವಿಗೆ ಬರುವ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಎಡೆಬಿಡದೆ ಸುರಿದ ಅಕಾಲಿಕ ಮಳೆಗೆ ಶೇ.70ರಷ್ಟು ಉತ್ಪಾದನೆ ಕುಂಠಿತವಾಗಿತ್ತು. ಪರಿಣಾಮ ಈರುಳ್ಳಿ ಬೆಲೆ 88 ರಿಂದ 90 ರೂ ದಾಟಿತ್ತು.
ಈರುಳ್ಳಿ ದುಬಾರಿಯಾದ ಪರಿಣಾಮ ಇಲ್ಲಿನ ಜನ ಸಮಾನ್ಯರು ತತ್ತರಿಸುವಂತಾಗಿತ್ತು. ಪರಿಸ್ಥಿತಿಯನ್ನು ನಿಬಾಯಿಸುವ ಸಲುವಾಗಿ ಅಂದಿನ ಕೇಂದ್ರ ಸರ್ಕಾರ ರಾಜ್ಯದ ಇತರೆಡೆಯಿಂದ ಈರುಳ್ಳಿಯನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಪೂರೈಕೆ ಮಾಡಲು ಮುಂದಾಗಿತ್ತು. ಅಲ್ಲದೆ, ಪಾಕಿಸ್ತಾನದಿಂದ ದಾಖಲೆ ಪ್ರಮಾಣದ ಈರುಳ್ಳಿ ಆಮದಿಗೂ ಮುಂದಾಗಿತ್ತು. ಆದರೂ ಪರಿಸ್ಥಿತಿ ಹತೋಟಿಗೆ ಬರಲು ಕನಿಷ್ಟ 6 ತಿಂಗಳೇ ಬೇಕಾಯಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಸರ್ಕಾರ ಸಾಕಷ್ಟು ಹೆಣಗಾಡುವಂತಾಗಿತ್ತು. ಅದಾಗಿ 10 ವರ್ಷಗಳ ನಂತರ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ವರುಣ ಮತ್ತೆ ಅಬ್ಬರಿಸಿದ್ದಾನೆ. ಈ ಎರಡೂ ರಾಜ್ಯದ ಈರುಳ್ಳಿ ಉತ್ಪಾದನೆಯಲ್ಲಿ ಶೇ.60 ರಷ್ಟು ಕುಂಠಿತವಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 2010ರಲ್ಲಿ ಇದೇ ಬಿಜೆಪಿ ಸರ್ಕಾರಕ್ಕೆ ಬೆದರಿಕೆ ಒಡ್ಡಿದ್ದ ಈರುಳ್ಳಿ ಬೆಲೆ ಇದೀಗ ಮತ್ತೆ ಅಂತಹದ್ದೇ ಬೆದರಿಕೆಯನ್ನು ಮುಂದಿಟ್ಟಿದೆ.
Comments are closed.