ಮನೋರಂಜನೆ

600 ಕೋಟಿ ಬಜೆಟ್​​ನಲ್ಲಿ ರಾಮಾಯಣ ಚಿತ್ರ..!

Pinterest LinkedIn Tumblr


ಭಾರತದ ಮಹಾಕಾವ್ಯಗಳಾದ ‘ರಾಮಾಯಣ’ ಮತ್ತು ‘ಮಹಾಭಾರತ’ ಯಾರಿಗೆ ತಾನೆ ಗೊತ್ತಿಲ್ಲ. ಈಗಾಗಲೇ ಕಿರುತೆರೆಯಲ್ಲಿ ದೃಶ್ಯಕಾವ್ಯಗಳಾಗಿ ಈ ಕಥೆಗಳು ಪ್ರೇಕ್ಷಕರ ಮನ ಗೆದ್ದಿವೆ. ಇನ್ನು ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕ ಮುನಿರತ್ನ ‘ಕುರುಕ್ಷೇತ್ರ’ ಕದನವನ್ನು ತೋರಿಸಿ ಭೇಷ್ ಎನಿಸಿಕೊಂಡಿದ್ದಾರೆ. ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿರುವ ‘ಕುರುಕ್ಷೇತ್ರ’ ಬಾಕ್ಸಾಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೇ ವಿಶ್ವಾಸದಲ್ಲೇ ಇದೀಗ ಮತ್ತೊಂದು ತಂಡ ‘ರಾಮಾಯಣ’ ಚಿತ್ರವನ್ನು ನಿರ್ಮಿಸಲು ಮುಂದಾಗಿದೆ.

ಈ ಹಿಂದೆ ಹಲವು ಬಾರಿ ‘ರಾಮಾಯಣ’ ಸಿನಿಮಾ ಬರಲಿದೆ ಎನ್ನಲಾಗಿತ್ತಾದರೂ, ಇದೀಗ ಪೌರಾಣಿಕ ಚಿತ್ರಗಳಿಗೆ ಸಿಗುತ್ತಿರುವ ಮನ್ನಣೆಯಿಂದ ಬಾಲಿವುಡ್​ ತಂಡವೊಂದು ಮಹಾಕಾವ್ಯಕ್ಕೆ ದೃಶ್ಯರೂಪ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 600 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗುವ ಈ ಐತಿಹಾಸಿಕ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ತೆಲುಗು ಚಿತ್ರರಂಗದ ನಿರ್ಮಾಪಕ ಅಲ್ಲು ಅರವಿಂದ್‌, ಪ್ಯಾಂಟಮ್‌ ಫಿಲ್ಮ್ ಸಂಸ್ಥಾಪಕ ಮಧು ಮಂಟೆನಾ ಮತ್ತು ಪ್ರೈಂ ಫೋಕಸ್‌ ಸ್ಟುಡಿಯೋ ಸಂಸ್ಥಾಪಕ ನಮಿತ್‌ ಮಲ್ಹೋತ್ರಾ ಎಂದು ತಿಳಿದು ಬಂದಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲಿ ಹೃತಿಕ್ ರೋಶನ್ ರಾಮನ ಅವತಾರ ತಾಳಲಿದ್ದಾರೆ. ಹಾಗೆಯೇ ಕನ್ನಡತಿ ದೀಪಿಕಾ ಪಡುಕೋಣೆ ಸೀತಾ ದೇವಿಯಾಗಿ ಕಾಣಿಸಿಕೊಳ್ಳಲು ಓಕೆ ಅಂದಿದ್ದಾರೆ. ಇದರ ನಡುವೆ ಭಾರೀ ಚರ್ಚೆ ಹುಟ್ಟುಹಾಕಿರುವುದು ರಾವಣನ ಪಾತ್ರ. ರಾಕ್ಷಸರ ರಾಜ ರಾವಣನ ಪಾತ್ರಕ್ಕಾಗಿ ಈಗ ಕೇಳಿ ಬರುತ್ತಿರುವ ಹೆಸರು ‘ಬಾಹುಬಲಿ’ಯದ್ದು.

ಹೌದು, ದೇಶದಾದ್ಯಂತ ಪ್ರಭಾಸ್​ಗೆ ಅಭಿಮಾನಿಗಳೇ ದಂಡೇ ಹುಟ್ಟಿಕೊಂಡಿದೆ. ‘ಬಾಹುಬಲಿ’ ಚಿತ್ರವು ರೆಬೆಲ್​ ಸ್ಟಾರ್​ರನ್ನು ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಸಿತ್ತು. ಇದರ ನಡುವೆ ‘ಸಾಹೋ’ ಚಿತ್ರಕ್ಕೆ ನಕರಾತ್ಮಕ ವಿಮರ್ಶೆಗಳು ಕೇಳಿಬಂದಿದ್ದರೂ ಅದು ಚಿತ್ರದ ಗಳಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದೆಲ್ಲವನ್ನು ಗಮನದಲ್ಲಿರಿಸಿ ಇದೀಗ ‘ರಾಮಾಯಣ’ ಚಿತ್ರತಂಡ ಪ್ರಭಾಸ್​ರನ್ನು ರಾವಣ ಪಾತ್ರ ಮಾಡುವಂತೆ ದಂಬಾಲು ಬಿದ್ದಿದೆ ಎಂದು ವರದಿಯಾಗಿದೆ.

ಬಿಟೌನ್​ನಿಂದ ಕೇಳಿ ಬಂದಿರುವ ಸುದ್ದಿ ಪ್ರಕಾರ, ಅಪ್ರತಿಮ ಪೌರಾಣಿಕ ಪಾತ್ರಕ್ಕಾಗಿ ಪ್ರಭಾಸ್ ಅವರನ್ನು ಮನವೊಲಿಸುವ ಪ್ರಯತ್ನ ಮುಂದುವರೆದಿದೆ. ಚಿತ್ರದ ಯುನಿಟ್​ನ ಪ್ರಮುಖರೊಬ್ಬರು ಪ್ರಭಾಸ್ ಅವರಿಗೆ ಭರ್ಜರಿ ಆಫರ್ ನೀಡಿದ್ದಾರೆ ಎನ್ನಲಾಗಿದೆ. ರಾವಣನ ಅವತಾರಕ್ಕೆ ನ್ಯಾಯ ಒದಗಿಸಲು ಪ್ರಭಾಸ್ ಅವರಿಂದ​ ಮಾತ್ರ ಸಾಧ್ಯವೆಂಬ ಅಭಿಪ್ರಾಯ ಚಿತ್ರತಂಡದಲ್ಲಿದ್ದು, ಹೀಗಾಗಿ ಡಾರ್ಲಿಂಗ್ ನಟನ ಡೇಟ್​ ಫಿಕ್ಸ್ ಮಾಡಲು ಕಾಯುತ್ತಿದ್ದಾರಂತೆ.

ಈ ಬಿಗ್ ಬಜೆಟ್​ ಚಿತ್ರವನ್ನು ‘ದಂಗಲ್’ ಸಿನಿಮಾ ಖ್ಯಾತಿಯ ನಿತೀಶ್ ತಿವಾರಿ ಹಾಗೂ ‘ಮಾಮ್’ ಚಿತ್ರ ನಿರ್ದೇಶಕ ರವಿ ಉದ್ಯಾವರ್ ಜೊತೆಗೂಡಿ ನಿರ್ದೇಶಿಸಲಿದ್ದಾರಂತೆ. ಒಂದು ಮೂಲದ ಪ್ರಕಾರ ಈ ಐತಿಹಾಸಿಕ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ತೆರೆಗೆ ಬರಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಮತ್ತೊಂದು ಪೌರಾಣಿಕ ಚಿತ್ರಕ್ಕೆ ಸದ್ದಿಲ್ಲದೆ ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. ‘ಕುರುಕ್ಷೇತ್ರ’ ಚಿತ್ರದ ಯಶಸ್ಸು ದಾಸನನ್ನು ರಾವಣನ ಸ್ಕ್ರಿಪ್ಟ್ ಓದುವಂತೆ ಮಾಡಿದೆ. ಹಿರಿಯ ಕಲಾವಿದ ಶ್ರೀನಿವಾಸ ಮೂರ್ತಿ ಅವರು ರಾವಣನ ಚಿತ್ರಕಥೆಯನ್ನು ಡಿ ಬಾಸ್​ಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಹಾಗೆಯೇ ಹಿಂದೊಮ್ಮೆ ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ಮತ್ತೆ ಮಾಡುವ ಆಸೆಯಿದೆ. ಒಳ್ಳೆಯ ಅವಕಾಶ ಸಿಕ್ಕರೆ, ಬೇರೆಲ್ಲ ಅವಕಾಶಗಳನ್ನೂ ಬದಿಗೊತ್ತಿ ಅಂತಹ ಚಿತ್ರಗಳಲ್ಲಿ ನಟಿಸೋಕೆ ರೆಡಿ ಎಂದಿದ್ದರು ದರ್ಶನ್. ಹೀಗಾಗಿ ‘ರಾಬರ್ಟ್’​ ಅವತಾರ ತಾಳಿದ ಬಳಿಕ ‘ರಾವಣ’ನಾಗಿ ದರ್ಶನ್ ಎಂಟ್ರಿ ಕೊಟ್ಟರೂ ಅಚ್ಚರಿಪಡಬೇಕಿಲ್ಲ.

Comments are closed.