ಕರ್ನಾಟಕ

ಮೊಬೈಲ್‌ ಗುಂಗಲ್ಲೇ ಮುಳುಗಿರುವ ವಿದ್ಯಾರ್ಥಿಗಳ ಹುಚ್ಚು ಬಿಡಲು ಸಚಿವರೇ ಏನಾದರು ಕ್ರಮ ಕೈಗೊಳ್ಳಬೇಕು!

Pinterest LinkedIn Tumblr


ಅಪ್ಪ-ಅಮ್ಮನ ಮೊಬೈಲ್‌ಗೆ ಬರುವ ಕರೆಗಳನ್ನು ಮೊದಲು ಸ್ವೀಕರಿಸುವುದೇ ಮಕ್ಕಳು. ಮುದ್ದಾದ ಸ್ವರದಲ್ಲಿ ಮಕ್ಕಳು ಹೆಲೋ ಹೇಳುವುದನ್ನು ಕೇಳಿದಾಗ ಖುಷಿಯಾಗುತ್ತದೆ. ಹಾಗಾಗಿ ಆ ಮಕ್ಕಳೆಷ್ಟು ಮೊಬೈಲ್‌ ದಾಸರಾಗಿದ್ದಾರೆ ಎಂಬುದನ್ನು ಚಿಂತಿಸುವುದೇ ಇಲ್ಲ. ಶಾಲೆಯಲ್ಲಿ ಹೋಂವರ್ಕ್‌ ಅಂತ ಒಂದಷ್ಟು ಕೊಟ್ಟಿರುತ್ತಾರೆ. ಮರುದಿನ ಶಾಲೆಗೆ ಬಂದಾಗ ಶಿಕ್ಷಕರು ಹೋಂವರ್ಕ್‌ ಎಲ್ಲಿ ಕೇಳಿದರೆ, ಬಿಟ್ಟು ಬಂದಿದ್ದೇನೆ, ಮರೆತು ಹೋಯಿತು ಇತ್ಯಾದಿ ಕಾರಣ ಹೇಳುತ್ತಾರೆ. ಮಕ್ಕಳ ಕಣ್ಣುಗಳನ್ನು ನೋಡಿದರೆ ನಿದ್ರೆಯಿಲ್ಲದೆ ಸೊರಗಿರುವುದು ಕಾಣಿಸುತ್ತದೆ. ಹೋಂವರ್ಕ್‌ ಮಾಡಿಲ್ಲ, ಮನೆಗೆಲಸ ಮಾಡಿಲ್ಲ, ಹಾಗಾದರೆ ನಿದ್ರೆಗೆಡುವಂತಹ ಕೆಲಸ ಮಕ್ಕಳಿಗೆ ಏನಿತ್ತು? ಮೊಬೈಲ್‌ ಒತ್ತುವ ಕೆಲಸವಿತ್ತು ಎಂಬುದೇ ನೇರ ಉತ್ತರ.

ಇಂದಿನ ಮಕ್ಕಳು ಅದೆಷ್ಟು ಮೊಬೈಲ್‌ ಹಚ್ಚಿಕೊಂಡಿವೆ ಎಂಬುದಕ್ಕೆ ಕೆಲವು ಶಿಕ್ಷಕರು ನೇರವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್‌ ಅವರ ಬಳಿ ಅವಲತ್ತುಕೊಳ್ಳುತ್ತಿದ್ದುದೇ ಸಾಕ್ಷಿ. ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ವಿಕ ಟೀಚರ್ಸ್‌ ಕಾರ್ನರ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಶಿಕ್ಷಕರ ದೂರುಗಳನ್ನು ಕೇಳಿ ದಂಗಾದರು.

ಮಕ್ಕಳು ತಪ್ಪದೆ ಹೋಂವರ್ಕ್‌ ಮಾಡಿಕೊಂಡು ಬರುವಂತೆ, ಮೊಬೈಲ್‌ ಸಂಪರ್ಕದಿಂದ ಹೊರಬರುವಂತೆ ಮಾಡಲು ನೀವೇ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರು ಸಚಿವರಿಗೇ ನೇರವಾಗಿ ದುಂಬಾಲು ಬಿದ್ದರು. ವಿದ್ಯಾರ್ಥಿಗಳ ಇಂತಹ ಸಮಸ್ಯೆಯನ್ನು ಶಿಕ್ಷಕರೇ ನಿವಾರಿಸಬೇಕು ಎಂಬುದು ಸಚಿವರ ಅಂಬೋಣ. ಆದರೆ ಸಚಿವರಿಗೆ ವಿದ್ಯಾರ್ಥಿಗಳ ಮೊಬೈಲ್‌ ಎಡಿಕ್ಷನ್‌ ಸಮಸ್ಯೆ ಚೆನ್ನಾಗಿ ಅರ್ಥವಾಗಿತ್ತು. ಈ ನಿಟ್ಟಿನಲ್ಲಿ ಈಗಾಗಲೇ ನಿಮಾನ್ಸ್‌ನ ಮನಃಶಾಸ್ತ್ರಜ್ಞರ ಜತೆ ಚರ್ಚಿಸಿರುವುದಾಗಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿರುವುದಾಗಿ ಸಚಿವರು ಅಭಯ ನೀಡಿದರು.

ಸಚಿವ ಸುರೇಶ್‌ ಕುಮಾರ್‌ ಅವರ ಜೊತೆಗಿನ ಫೋನ್‌ ಇನ್‌ ಕಾರ್ಯಕ್ರಮದ ಪೂರ್ಣ ವಿವರ ಮತ್ತು ವಿಡಿಯೋ ಮಂಗಳವಾರ ಪ್ರಕಟಗೊಳ್ಳಲಿದೆ ನಿಮ್ಮ ಮಕ್ಕಳು ಮೊಬೈಲ್‌ ಅಡಿಕ್ಟ್‌ ಆಗಿದ್ದಾರೆಯೇ? ಈ ಮೊಬೈಲ್‌ ಪಿಡುಗಿನಿಂದ ಮಕ್ಕಳನ್ನು ದೂರ ಮಾಡಲು ಏನು ಮಾಡಬಹುದು? ಕಮೆಂಟ್‌ ಮಾಡಿ.

Comments are closed.