ಮನೋರಂಜನೆ

ಸಲ್ಮಾನ್​ ಖಾನ್​ರಿಂದ ಫ್ಲ್ಯಾಟ್-ಕಾರು ಗಿಫ್ಟ್: ಮೌನ ಮುರಿದ ರಾನು​

Pinterest LinkedIn Tumblr


ಬಾಲಿವುಡ್​ನಲ್ಲೀಗ ರಾನು ಮೊಂಡಲ್ ಅವರದ್ದೇ ಸುದ್ದಿ. ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’.. ಹಾಡಿನ ಒಂದು ವಿಡಿಯೋ ರಾನು ಜೀವನವನ್ನೇ ಬದಲಿಸಿತು. ಕೆಲ ದಿನಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಹಾಡುತ್ತಿದ್ದ ಬಡ ಗಾಯಕಿ ಈಗ ಬಿಟೌನ್​ನ ಸ್ಟಾರ್ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದ ತೇರಿ ಮೇರಿ ಕಹಾನಿ ಗೀತೆಗೆ ತಮ್ಮ ಮಧುರ ಕಂಠ ನೀಡಿದ್ದಾರೆ. ಚೊಚ್ಚಲ ಹಾಡಿಗೆ ಹಿಮೇಶ್ ರೇಶ್ಮಿಯಾ ಅವರು ರಾನುಗೆ 6 ರಿಂದ 7 ಲಕ್ಷ ರೂ ಸಂಭಾವನೆ ನೀಡಿದ್ದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ರಾನು ನೆರವಿಗೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಧಾವಿಸಿದ್ದಾರೆ ಎನ್ನಲಾಗಿತ್ತು.

ರಾನುಗಾಗಿ ಸಲ್ಲು ಮಿಯಾ ಬರೋಬ್ಬರಿ 55 ಲಕ್ಷದ ಮನೆ ಕೊಡಿಸಿದ್ದಾರೆ. ಓಡಾಡಲು ಕಾರೊಂದನ್ನು ನೀಡಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಸಲ್ಲುವಾಗಲಿ ಇಲ್ಲ ರಾನು ಆಗಲಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿರಲಿಲ್ಲ.

ಇದೀಗ ಸಲ್ಮಾನ್ ಖಾನ್ ಗಿಫ್ಟ್​ ಸುದ್ದಿಯ ಬಗ್ಗೆ ರಾನು ಮೊಂಡಲ್ ಮಾತನಾಡಿದ್ದಾರೆ. ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಳಲಾದ ಫ್ಲ್ಯಾಟ್ ಗಿಫ್ಟ್​ ಬಗ್ಗೆ, ‘ನನಗೆ ಮನೆ ನೀಡಿದ್ದರೆ, ನಾನು ಎಲ್ಲರ ಮುಂದೆ ಘೋಷಿಸುತ್ತಿದ್ದೆ’ ಎಂದು ಬಡ ಗಾಯಕಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಲ್ಮಾನ್ ಚಿತ್ರಗಳಲ್ಲಿ ಹಾಡಲು ಏನಾದರೂ ಅವಕಾಶ ಸಿಕ್ಕಿದೆಯೇ? ಎಂಬ ಪ್ರಶ್ನೆಗೆ, ‘ಇಲ್ಲ ನಾನು ಯಾರೊಂದಿಗೂ ಮಾತನಾಡಲಿಲ್ಲ. ಅವರಂತಹ ದೊಡ್ಡ ನಟರೊಂದಿಗೆ ಮಾತನಾಡುವುದು ದೂರದ ವಿಷಯ’ ಎಂದು ತಿಳಿಸಿದರು.

‘ಫ್ಲಾಟ್ ಹೊರತುಪಡಿಸಿ, ಸಲ್ಮಾನ್ ಖಾನ್ ನನಗೆ ಕೆಂಪು ಬಣ್ಣದ ಕಾರನ್ನು ನೀಡಿದ್ದಾರೆ ಎಂದು ವರದಿಗಳು ಹರಿದಾಡಿದ್ದವು. ಇದೆಲ್ಲವೂ ಸುಳ್ಳು ಸುದ್ದಿಗಳು, ನಾನು ಅವರೊಂದಿಗೆ ಮಾತನಾಡಿದ್ದರೆ ಅಲ್ಲವೇ ಸಹಾಯ ಸಿಗುವುದು ಎಂದು ರಾನು ಹೇಳಿದರು. ನನನ್ನು ದೇವರ ರೂಪದಲ್ಲಿ ಭೇಟಿಯಾದ ಹಿಮೇಶ್ ರೇಶ್ಮಿಯಾ ಅವರಿಗೆ ಧನ್ಯವಾದ ಹೇಳುತ್ತೇನೆ . ಅವರಿಂದಾಗಿ ನಾನಿಂದು ಗುರುತಿಸಿಕೊಳ್ಳುವಂತಾಗಿದೆ’ ಎಂದರು.

ಹಿಮೇಶ್ ರೇಶ್ಮಿಯಾ ನಾಯಕನಾಗಿ ನಟಿಸಿ, ಸಂಗೀತ ನಿರ್ದೇಶಿಸಿರುವ ‘ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್​’ ಸಿನಿಮಾದಲ್ಲಿ ರಾನು ಮೂರು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ‘ತೇರಿ ಮೇರಿ ಕಹಾನಿ’ ಗೀತೆಯು ಈಗಾಗಲೇ ಬಿಡುಗಡೆಯಾಗಿದ್ದು, ಭಾರೀ ಜನಪ್ರಿಯತೆ ಗಳಿಸಿದೆ.

Comments are closed.