ರಾಷ್ಟ್ರೀಯ

ಮೀಸಲಾತಿ ವ್ಯವಸ್ಥೆ ಅಗತ್ಯ ಎನಿಸುವವರೆಗೂ ಮುಂದುವರಿಯಲಿ: ಆರೆಸ್ಸೆಸ್

Pinterest LinkedIn Tumblr


ಅಜ್ಮೇರ್(ಸೆ. 09): ಭಾರತೀಯ ಸಂವಿಧಾನದಲ್ಲಿ ರೂಪಿಸಲಾದ ಮೀಸಲಾತಿ ವ್ಯವಸ್ಥೆಗೆ ನಮ್ಮ ಸಂಘಟನೆ ಬದ್ಧವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಪಷ್ಟಪಡಿಸಿದೆ. ಇಂದು ಪುಷ್ಕರ್​ನಲ್ಲಿ ನಡೆದ ಮೂರು ದಿನಗಳ ಆರೆಸ್ಸೆಸ್ ಸಮನ್ವಯ ಸಭೆಯ ಸಮಾರೋಪದಂದು ಸಹ ಸರಕಾರ್ಯವಾಹ (ಜಂಟಿ ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು. ಮೀಸಲಾತಿ ವ್ಯವಸ್ಥೆ ಬಗ್ಗೆ ಮರುವಿಚಾರ ಮಾಡಬೇಕು ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಈ ಮೊದಲು ಒಂದೆರಡು ಬಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು. ಈಗ ಆರೆಸ್ಸೆಸ್ ಸಭೆಯಲ್ಲಿ ಮೀಸಲಾತಿ ಬಗ್ಗೆ ಮಹತ್ವದ ಸ್ಪಷ್ಟೀಕರಣ ಬಂದಿದೆ.

ಸಂವಿಧಾನದಲ್ಲಿ ರೂಪಿಸಲಾಗಿರುವ ಮೀಸಲಾತಿಗೆ ಆರೆಸ್ಸೆಸ್ ವಿರೋಧವಿಲ್ಲ. ಅದರ ನೈಜ ಫಲಾನುಭವಿಗಳಿಗೆ ಮೀಸಲಾತಿ ಅಗತ್ಯ ಎನಿಸುವವರೆಗೆ ಆ ಸೌಲಭ್ಯ ಮುಂದುವರಿಯಬೇಕು ಎಂಬುದು ಆರೆಸ್ಸೆಸ್ ನಿಲುವಾಗಿದೆ ಎಂದು ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದರು.

“ನಮ್ಮ ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನತೆ ಇದೆ. ಹೀಗಾಗಿ, ಮೀಸಲಾತಿ ಅಗತ್ಯವಿದೆ” ಎಂದವರು ಅಭಿಪ್ರಾಯಪಟ್ಟರು.

ಕಳೆದ ತಿಂಗಳಷ್ಟೇ ಮೋಹನ್ ಭಾಗವತ್ ಅವರು ಮೀಸಲಾತಿ ನೀತಿಯನ್ನು ಪುನರ್​ಪರಿಶೀಲಿಸಬೇಕೆಂದು ಕೇಂದ್ರಕ್ಕೆ ಸಲಹೆ ನೀಡಿದ್ದರು. ಮೀಸಲಾತಿ ಪರವಾಗಿರುವವರು ಪ್ರತಿವಾದಿಗಳ ಅಭಿಪ್ರಾಯಗಳನ್ನ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ಮೀಸಲಾತಿ ವಿರೋಧಿಗಳೂ ಕೂಡ ಅದೇ ಧೋರಣೆ ಹೊಂದಿರಬೇಕು. ಮೀಸಲಾತಿ ಬಗ್ಗೆ ಚರ್ಚೆ ನಡೆದಾಗೆಲ್ಲಾ ತೀಕ್ಷ್ಣ ಪ್ರತಿಕ್ರಿಯೆಗಳು ಬರುತ್ತವೆ. ಮೀಸಲಾತಿಯಿಂದ ಸಮಾಜದ ವಿವಿಧ ವರ್ಗಗಳ ನಡುವೆ ಸೌಹಾರ್ದ ಸಂಬಂಧ ರೂಪುಗೊಳ್ಳುವಂತಾಗಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥರು ಕರೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪುಷ್ಕರ್​ನಲ್ಲಿ ನಡೆದ ಆರೆಸ್ಸೆಸ್ ಸಮನ್ವಯ ಸಭೆಯಲ್ಲಿ ಮೀಸಲಾತಿ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಇದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ಹೊಸಬಾಳೆ, ಈ 3 ದಿನಗಳ ಸಭೆಯಲ್ಲಿ ಮೀಸಲಾತಿ ಬಗ್ಗೆ ಯಾವುದೇ ಚರ್ಚೆಗಳಾಗಲಿಲ್ಲ ಎಂದು ತಿಳಿಸಿದರು.

ಎನ್​ಆರ್​ಸಿ ಪಟ್ಟಿಯಲ್ಲಿರುವ ದೋಷ ಸರಿಪಡಿಸಿಯೇ ಮುಂದುವರಿಯಿರಿ: ಆರೆಸ್ಸೆಸ್ ಸಲಹೆ:

ಆರೆಸ್ಸೆಸ್ ಸಮನ್ವಯ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ವಿವಾದಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ನೊಂದಣಿ ಪಟ್ಟಿ ಬಗ್ಗೆ ವಿಶೇಷವಾಗಿ ಮಾತನಾಡಿದರು. ಎನ್​ಆರ್​ಸಿ ಯೋಜನೆಯನ್ನು ಸ್ವಾಗತಿಸಿದರಾದರೂ ಅದರಲ್ಲಿ ಒಂದಷ್ಟು ಲೋಪದೋಷಗಳಿವೆ ಎಂಬುದನ್ನು ಒಪ್ಪಿಕೊಂಡರು.

“ಎನ್​ಆರ್​ಸಿ ಅಂತಿಮ ಪಟ್ಟಿಯು ಕಾನೂನೇನಲ್ಲ. ಅದರಲ್ಲಿ ಕೆಲ ತಪ್ಪು ಮತ್ತು ದೋಷಗಳಿವೆ. ಇವುಗಳನ್ನು ಮೊದಲು ನಿವಾರಿಸಿಯೇ ಸರ್ಕಾರ ಮುಂದುವರಿಯಬೇಕು” ಎಂದು ಹೊಸಬಾಳೆ ಸಲಹೆ ನೀಡಿದರು.

“ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ 35-40 ಲಕ್ಷ ಜನರು ಅಸ್ಸಾಮ್​ನಲ್ಲಿ ನೆಲಸಿದ್ದಾರೆ. ಹಿಂದಿನ ಸರ್ಕಾರಗಳು ಇವರೆಲ್ಲರಿಗೂ ಅಧಿಕೃತ ದಾಖಲೆಗಳನ್ನು ನೀಡಿದೆ. ಇದರಿಂದಾಗಿ ಅಕ್ರಮ ಬಾಂಗ್ಲಾದೇಶೀಯರನ್ನು ಗುರುತಿಸಿ ಎನ್​ಆರ್​ಸಿ ಪಟ್ಟಿ ತಯಾರು ಮಾಡುವುದು ಬಹಳ ಕ್ಲಿಷ್ಟಕರ ಹಾಗೂ ಸಂಕೀರ್ಣ ಕಾರ್ಯವಾಗಿತ್ತು. ಅಸ್ಸಾಮ್ ರಾಜ್ಯದ ಬಿಜೆಪಿ ಸರ್ಕಾರ ಈ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದೆ” ಎಂದು ಆರೆಸ್ಸೆಸ್​ನ ಅತ್ಯಂತ ಹಿರಿಯ ಮುಖಂಡರಲ್ಲೊಬ್ಬರಾದ ದತ್ತಾತ್ರೇಯ ಹೊಸಬಾಳೆ ಶ್ಲಾಘಿಸಿದರು.

ಮೂರು ದಿನಗಳ ಈ ಸಮನ್ವಯ ಸಭೆಯಲ್ಲಿ ಆರೆಸ್ಸೆಸ್​ನ 35 ಅಂಗ ಸಂಘಟನೆಗಳಿಂದ 200ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೊದಲಾದವರೂ ಈ ಸಭೆಯಲ್ಲಿ ಭಾಗಿಯಾಗಿದ್ದರು. ಲೋಕಸಭೆ ಚುನಾವಣೆಯ ಬಳಿಕ ಈ ಮಟ್ಟದ ಸಭೆ ನಡೆದದ್ದು ಇದೇ ಮೊದಲಾಗಿದೆ.

Comments are closed.