ಕರ್ನಾಟಕ

ಸೊಳ್ಳೆ ಕಾಟಕ್ಕೆ ತತ್ತರಿಸಿದ ಡಿಕೆಶಿ

Pinterest LinkedIn Tumblr


ಬೆಂಗಳೂರು (ಸೆ.6): ದೆಹಲಿ ನಿವಾಸದಲ್ಲಿ ಅಕ್ರಮ ಹಣ ದೊರೆತ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸೆ.13ರ ವರೆಗೆ ಡಿಕೆ ಶಿವಕುಮಾರ್​ ಅವರನ್ನು ಕೋರ್ಟ್​ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ಅವರನ್ನು ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ದೇಶದ ಎರಡನೇ ಶ್ರೀಮಂತ ರಾಜಕಾರಣಿಯಾದರೂ ಡಿಕೆ ಶಿವಕುಮಾರ್​ಗೆ ಜೈಲಿನಲ್ಲಿ ಸಾಮಾನ್ಯ ಎಂದೇ ಪರಿಗಣಿಸಲಾಗಿದೆ. ಇದರಿಂದ ಅವರು ಚಿಂತಾಕ್ರಾಂತರಾಗಿದ್ದಾರೆ.

ಸದಾಶಿವ ನಗರದಲ್ಲಿ ಡಿಕೆಶಿ ಐಷಾರಾಮಿ ಮನೆ ಹೊಂದಿದ್ದಾರೆ. ಮನೆಯಲ್ಲಿ ಕೈಗೊಬ್ಬರು-ಕಾಲಿಗೊಬ್ಬರು ಆಳುಗಳಿದ್ದಾರೆ. ಡಿಕೆಶಿ ಮನೆಯಲ್ಲಿ ಮಲಗುವ ಹಾಸಿಗೆ ಸಿದ್ಧಪಡಿಸುವುದು ಕೆಲಸದವರೇ. ಆದರೆ, ಜೈಲಿನಲ್ಲಿ ಮಾತ್ರ ಡಿಕೆಶಿ ಏಕಾಂಗಿ. ಅಲ್ಲಿ ಹೇಳಿದರೆ ಕೇಳುವವರು ಯಾರೂ ಇಲ್ಲ. ಸಾಮಾನ್ಯನಂತೆ ಇರುವುದು ಡಿಕೆಶಿ ಬಳಿ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಶ್ರೀಮಂತರು ಪ್ರಭಾವಿ ರಾಜಕಾರಣಿಗಳು ಜೈಲು ಸೇರಿದರೆ ಅವರಿಗೆ ವಿಐಪಿ ಟ್ರೀಟ್​ಮೆಂಟ್​ ಸಿಗಲಿದೆ ಎನ್ನುವ ಮಾತಿದೆ. ಆದರೆ, ಡಿಕೆಶಿಗೆ ಈ ಅವಕಾಶವಿಲ್ಲ. ಅವರಿಗೆ ಕಾಮನ್ ಸೆಲ್, ಕಾಮನ್ ಬಾತ್​ ರೂಂ ನೀಡಲಾಗಿದೆ. ಪರಿಸ್ಥಿತಿ ನೆನೆದು ಡಿ.ಕೆ. ಶಿವಕುಮಾರ್ ಪರಿತಪಿಸಿದ್ದಾರೆ.

ಜೈಲಿನಲ್ಲಿ ರಾತ್ರಿಯಿಡೀ ಡಿಕೆಶಿ ಕಣ್ಣೀರಿಟ್ಟಿದ್ದಾರೆ. ಸೊಳ್ಳೆ ಕಾಟಕ್ಕೆ ಅವರು ತತ್ತರಿಸಿ ಹೋಗಿದ್ದಾರೆ ಎಂಬುದು ಮೂಲಗಳ ಮಾಹಿತಿ. ಡಿಕೆಗೆ ಸಿಂಗಲ್ ಪ್ಯಾನ್ ವ್ಯವಸ್ಥೆ ಮಾತ್ರ ಮಾಡಲಾಗಿದೆ. ನಂತರ ಮನವಿ ಮೇರೆಗೆ ಪೊಲೀಸರು ಕೂಲರ್ ತಂದುಕೊಟ್ಟಿದ್ದಾರೆ.

ಇಂದು ಡಿಕೆಶಿಗೆ ಇಡಿ‌ ಕಸ್ಟಡಿಯ 3ನೇ ದಿನ. ಬುಧವಾರದಿಂದಲೇ ಅನ್ವಯವಾಗುವಂತೆ ಅವರನ್ನು ಕೋರ್ಟ್​ ಕಸ್ಟಡಿಗೆ ನೀಡಿತ್ತು. ನಿನ್ನೆ ಅವರು ವಿಚಾರಣೆಗೆ ಹಾಜಾರಗಿದ್ದರು. ನಿನ್ನೆ ಸಂಜೆ ಸಹೋದರ ಡಿ.ಕೆ.ಸುರೇಶ್​, ಕೆ.ಎಚ್. ಮುನಿಯಪ್ಪ ಸೇರಿ ಹಲವು ಕಾಂಗ್ರೆಸ್​​ ಮುಖಂಡರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಬೆಳಗ್ಗೆ 10.30ಕ್ಕೆ ತುಘಲಕ್ ರೋಡ್ ಪೊಲೀಸ್ ಠಾಣೆಯಿಂದ ಇಡಿ ಕಚೇರಿಗೆ ಶಿವಕುಮಾರ್​ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ. 11 ಗಂಟೆಗೆ ಇಡಿ ಕಚೇರಿಯಲ್ಲಿ ಡಿಕೆಶಿ ವಿಚಾರಣೆ ಆರಂಭಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಯವರೆಗೂ ನಿರಂತರವಾಗಿ ವಿಚಾರಣೆ‌ ನಡೆಯಲಿದೆ.

ಡಿಕೆಶಿಗೆ ಅನಾರೋಗ್ಯ ಕಾಡುತ್ತಿದೆ ಎಂದು ಅವರ ಪರ ವಕೀಲರು ಕೋರ್ಟ್​ನಲ್ಲಿ ವಾದ ಮಂಡಿಸಿದ್ದರು. ಹಾಗಾಗಿ, ಟ್ರಬಲ್​ ಶೂಟರ್​ಗೆ​ ಅಗತ್ಯ ಬಿದ್ದರೆ ವೈದ್ಯಕೀಯ ನೆರವು ಕೂಡ ನೀಡಲಾಗುತ್ತದೆ. ಅರ್ಧ ಗಂಟೆಯಲ್ಲಿ ಕುಟುಂವದವರು, ವೈದ್ಯರು ಮತ್ತು ವಕೀಲರನ್ನು ಅವರು ಭೇಟಿ ಮಾಡಬಹುದು. ವಿಚಾರಣೆ ಮುಗಿದ ಬಳಿಕ ಮತ್ತೆ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಡಿಕೆಶಿಯನ್ನು ಕರೆದೊಯ್ಯಲಾಗುತ್ತದೆ.

ಏನಿದು ಪ್ರಕರಣ:
ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.

Comments are closed.