
ನವದೆಹಲಿ: ಭೂಮಿಯಿಂದ ಸುಮಾರು 3.8 ಲಕ್ಷ ಕಿ.ಮೀ ಪ್ರಯಾಣಿಸಿ ಚಂದ್ರನ ಸಮೀಪಿಸಿರುವ ಚಂದ್ರಯಾನ-2 ಗಗನನೌಕೆ ಈಗ ಚಂದ್ರನ ಮೇಲೆ ಇಳಿಸಲು ಇಸ್ರೋ ಸಿದ್ಧವಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ನೌಕೆ ಆರ್ಬಿಟರ್‌ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಬೇರ್ಪಡಿಸುವ ಪ್ರಕ್ರಿಯೆ ಆರಂಭವಾಗಲಿದೆ. ಸೋಮವಾರದಿಂದ ಇಡೀ ಗಗನನೌಕೆ ಚಂದ್ರನ ಮೇಲೆ ಇಳಿಯಲು ಆರಂಭಿಸಲಿದೆ. ಸದ್ಯ ಚಂದ್ರನಿಂದ ಕೇವಲ 119 ಕಿ.ಮೀ ದೂರದಲ್ಲಿ ಗಗನ ನೌಕೆ ಇದ್ದು, ಸೋಮವಾರದಿಂದ ಇಡೀ ಇಸ್ರೋ ತಂಡ ವಿಕ್ರಮ್ ಲ್ಯಾಂಡರ್ ಮೇಲೆ ಗಮನಹರಿಸಲಿದೆ.
ಇನ್ನು ವಿಕ್ರಮ್‌ನಿಂದ ಬೇರ್ಪಡೆಗೊಂಡ ಆರ್ಬಿಟರ್ ಇದೇ ಕಕ್ಷೆಯಲ್ಲಿ ಮುಂದಿನ ಒಂದು ವರ್ಷ ಕಾಲ ಚಂದ್ರನನ್ನು ಸುತ್ತಲಿದೆ. ಇದರಲ್ಲಿ ಒಟ್ಟು ಎಂಟು ಸಲಕರಣೆಗಳಿದ್ದು, 1000 ವ್ಯಾಟ್ ವಿದ್ಯುತ್ ಅನ್ನು ಹೊಂದಿದೆ. ಆಗಾಗ್ಗೆ ಚಿತ್ರಗಳನ್ನು ಸೆರೆ ಹಿಡಿದು ಭೂಮಿಗೆ ಕಳುಹಿಸಲಿರುವ ಇದು ಜೀವಿ, ಜಲ ಹಾಗೂ ಇತರ ಅಂಶಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಇನ್ನು ವಿಕ್ರಮ್ ಲ್ಯಾಂಡರ್ ದಿನದಿಂದ ದಿನಕ್ಕೆ ತನ್ನ ವೇಗ ಕಡಿಮೆ ಮಾಡಿಕೊಳ್ಳಲಿದ್ದು, ಸೆ. 7 ರಂದು ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಮೇಲೆ ಇಳಿಯಲಿದೆ.
7ರಂದು ಬೆಂಗಳೂರಿಗೆ ಮೋದಿ
ಸೆ.7ರಂದು ಗಗನನೌಕೆಯು ಚಂದ್ರನ ಮೇಲೆ ಇಳಿಯುವಂಥ ಐತಿಹಾಸಿಕ ಘಟನೆಗೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದು, ಅಂದು ಅವರು ಬೆಂಗಳೂರಿಗೆ ಬಂದು ಈ ದೃಶ್ಯವನ್ನು ವೀಕ್ಷಿಸಲಿದ್ದಾರೆ. ದೇಶಾದ್ಯಂತದ 60 ವಿದ್ಯಾರ್ಥಿಗಳನ್ನೂ ಇಸ್ರೋ ಆಯ್ಕೆ ಮಾಡಿದ್ದು, ಅವರೂ ಪ್ರಧಾನಿ ಮೋದಿ ಜತೆ ಕುಳಿತು ಚಂದ್ರನ ಮೇಲೆ ನೌಕೆ ಇಳಿಯುವುದನ್ನು ನೋಡಲಿದ್ದಾರೆ.
Comments are closed.