ರಾಷ್ಟ್ರೀಯ

ವಿಜಯಪುರ: ತನ್ನಿಂದ ತಾನೆ ತೂಗಾಡಿ ಭಯ ಮೂಡಿಸಿದ ಜೋಕಾಲಿಗಳು!

Pinterest LinkedIn Tumblr

ವಿಜಯಪುರ: ಅಮಾವಾಸ್ಯೆ ದಿನವಾದ ನಿನ್ನೆ ಸಂಜೆ ಜೋಕಾಲಿಗಳೆರಡು ತನ್ನಿಂದ ತಾನೆ ತೂಗಿಕೊಂಡು ಆಡುತ್ತಿರುವುದು ಜನರಲ್ಲಿ ಭಯ ಮೂಡಿಸಿದೆ.

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿನ ರಾಕ್ ಗಾರ್ಡನ್ ನಲ್ಲಿ ಘಟನೆ ನಡೆದಿದ್ದು, ನಿನ್ನೆ ಸಂಜೆ 6.30ರ ವೇಳೆಗೆ ರಾಕ್ ಗಾರ್ಡನ್‌ನಲ್ಲಿನ ಎಂಟು ಜೋಕಾಲಿಗಳಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತೂಗಾಡಿವೆ.

ಜೋಕಾಲಿಯಲ್ಲಿ ಒಬ್ಬರು ಕುಳಿತು ಮತ್ತೊಬ್ಬರು ತೂಗಿದಾಗ ಹೇಗೆ ಅಲುಗಾಡುತ್ತವೋ ಹಾಗೆ ತನ್ನಷ್ಟಕ್ಕೆ ತಾನೇ ತೂಗಿವೆ. ಈ ದೃಶ್ಯಾವಳಿಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುಮಾರು ಎರಡ್ಮೂರು ನಿಮಿಷಗಳವರೆಗೆ ಜೋಕಾಲಿಗಳು ತೂಗಿವೆ. ಎಂಟರಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತೂಗಿದ್ದು, ಇನ್ನುಳಿದವುಗಳು ಅಲುಗಾಡದೆ ಇರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಗಾಳಿಗೆ ಜೋಕಾಲಿಗಳು ತೂಗಿದ್ದರೆ ಎಲ್ಲವೂ ಅಲುಗಾಡಬೇಕಿತ್ತು. ಆದರೆ, ಎರಡು ಮಾತ್ರ ಜೋರಾಗಿಯೇ ತೂಗಿವೆ. ಗಾರ್ಡನ್‌ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ ಎಂಬುವರು ನಿನ್ನೆ ಸಂಜೆ ಅಂಗಡಿ ಬಂದ್ ಮಾಡಿಕೊಂಡು ಬರುತ್ತಿದ್ದ ವೇಳೆ ಯಾರೂ ಇಲ್ಲದೆಯೇ ಜೋಕಾಲಿಗಳು ತೂಗುತ್ತಿರುವುದನ್ನು ಕಂಡು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಭಯಬಿದ್ದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕಬ್ಬಿಣ ಸರಳಿನಿಂದ ತಯಾರಾದ ಮಣಭಾರದ ಜೋಕಾಲಿಗಳು ಹೀಗೆ ಮನುಷ್ಯರು ಇಲ್ಲದೆ ತೂಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದನ್ನು ನೋಡಿದ ಕೆಲವರು ನಿನ್ನೆ ಅಮವಾಸ್ಯೆ ಆಗಿದ್ದರಿಂದಾಗಿ ಈ ರೀತಿ ಆಗಿರಬಹುದು ಎಂಬುದು ಒಂದೆಡೆಯಾದರೆ, ಇನ್ನು ಕೆಲವರು ಯಾರೂ ಹೀಗೆ ಜೋಕಾಲಿಗಳನ್ನು ತೂಗಿ ಬಳಿಕ ವಿಡಿಯೋ ಮಾಡಿರಬಹುದು ಎಂದು ಯೋಚಿಸುತ್ತಿದ್ದಾರೆ.

Comments are closed.