ಕರಾವಳಿ

ಕೋಟೇಶ್ವರದ ಇಸಿ‌ಆರ್ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿರುವ ಇಸಿ‌ಆರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜು ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಂದರೆ ಎನ್.ಎಸ್.ಎಸ್ ಘಟಕವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಇಸಿ‌ಆರ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಮಧು ಟಿ. ಭಾಸ್ಕರನ್ ಅಧ್ಯಕ್ಷತೆಯಲ್ಲಿ ನಡೆದ ಎ.ಎಸ್.ಎಸ್. ಘಟಕ ಉದ್ಘಾಟನೆಯನ್ನು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಯುವಜನಾಂಗವು ಬೆಳೆಯಲು ಪಾಲಕರು ಹಾಗೂ ಗುರುಗಳು ಹಾಕಿಕೊಡುವ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ವಿದ್ಯಾಸಂಸ್ಥೆಯ ಹೆಸರನ್ನು ಉಳಿಸುವಂತಹ ಕಾರ್ಯ ಮಾಡಬೇಕು. ಶಿಸ್ತು ಕಲಿಸುವ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಸನ್ನಡತೆ ಬೆಳೆಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಬೇಕು ಎಂದು ಕರೆಕೊಟ್ಟರು. ೪೪ ಲಕ್ಷ ಮಂದಿಯನ್ನು ಹೊಂದಿರುವ ಜಯಕರ್ನಾಟಕ ಸಂಘಟನೆ ಸ್ಥಾಪನೆಯ ಉದ್ದೇಶವೇ ಯುವಕರನ್ನು ಒಗ್ಗೂಡಿಸುವುದಕ್ಕಾಗಿದೆ, ವಿದ್ಯಾರ್ಥಿಗಳಿಗೆ ಯಾವುದೇ ಕುಂದುಕೊರತೆ ಬಂದರೆ ಸಂಘಟನೆ ಸುಮ್ಮನೆ ಕೂರಲ್ಲ ಎಂದರು.

ಕುಂದಾಪುರ ಸಂಚಾರಿ ಠಾಣೆಯ ಸಹಾಯಕ ಠಾಣಾ ಬರಹಗಾರ ನವೀನ್ ಕುಮಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಹವಾಸ ದೋಷದಿಂದ ಕೆಲವರು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ವ್ಯಕ್ತಿ ಹುಟ್ಟಿದಾಗಿನಿಂದಲೂ ಅಪರಾಧಿಯಲ್ಲ, ಬದಲಾಗಿ ಸಂದರ್ಭ ಹಾಗೂ ಆಯಾಯ ಪರಿಸರ ಆತನನ್ನು ತಪ್ಪಿತಸ್ಥನನ್ನಾಗಿಸುತ್ತದೆ. ತಪ್ಪನ್ನು ತಿದ್ದಿಕೊಂಡು ಉತ್ತಮ ಬದುಕು ನಡೆಸಬೇಕು. ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಬಗ್ಗೆ ಅರಿಯಬೇಕು ಮತ್ತು ಇತರರಲ್ಲಿ ಅರಿವು ಮೂಡಿಸಬೇಕು. ಸಂಚಾರಿ ನಿಯಮ ವಿಚಾರದಲ್ಲಿ ಎಲ್ಲರೂ ಎಚ್ಚರಿಕೆ ವಹಿಸಲೆಂದು ಅಧಿಕ ಮೊತ್ತದ ದಂಡ ವಿಧಿಸಲಾಗುತ್ತಿದೆ. ಎಂಟು ದಿಕ್ಕು ಹಗೂ ದಿನದ ಇಪ್ಪತ್ತನಾಲ್ಕು ಗಂಟೆ ಬಗ್ಗೆ ಎನ್.ಎಸ್.ಎಸ್. ಬಾವುಟ ತಿಳಿಹೇಳುತ್ತಿದ್ದು ಅದರಂತೆಯೇ ವಿದ್ಯಾರ್ಥಿಗಳು ಸಮಯಕ್ಕೆ ಬೆಲೆ ಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಸಂಚಾರಿ ಠಾಣೆಯ ಸಹಾಯಕ ಉಪನಿರೀಕ್ಷಕ ಶ್ರೀಧರ್, ಜಯಕರ್ನಾಟಕ ಸಂಘಟನೆಯ ಗೌರವ ಸಲಹೆಗಾರ ಸುಧಾಕರ ರಾವ್ ಬಾರ್ಕೂರು, ಇಸಿ‌ಆರ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಶನ್ ನಿರ್ದೇಶಕಿ ಮಹಿಮಾ ಮಧು, ಪ್ರಾಂಶುಪಾಲೆ ಪ್ರೋ. ಚಂದ್ರಕಲಾ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಫ್ರೋ. ಲೀಜಾ ಲಿಯೋ, ಕೆನರಾ ಕಾಲೇಜ್ ಆಫ್ ನರ್ಸಿಂಗ್ ಇದರ ಪ್ರಾಂಶುಪಾಲ ನಟರಾಜ್, ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ನಿತ್ಯಾನಂದ ಅಮೀನ್, ಶರತ್ ಶೆಟ್ಟಿ, ರತ್ನಾಕರ, ಸಂಚಾರಿ ಠಾಣೆ ಸಿಬ್ಬಂದಿ ಶಶಿಧರ್ ಶೆಟ್ಟಿ, ಕಾಲೇಜಿನ ಡಿಸಿಪ್ಲಿನ್ ಆಫೀಸರ್ ರಾಘವೇಂದ್ರ ವಿ.ಕೆ. ಇದ್ದರು.

ಈ ಹಿಂದಿನ ಎನ್.ಎಸ್.ಎಸ್. ನಾಯಕಿ ಪೂರ್ಣಿಮಾ ಪ್ರಸ್ತುತ ನಾಯಕರಾದ ಜಾಹ್ನವಿ ಎಸ್., ವಿನಯ್ ಅವರಿಗೆ ಎನ್.ಎಸ್.ಎಸ್. ಧ್ವಜ ನೀಡಿ ಶುಭಕೋರಿದರು. ಕಿರಣ್ ಉಡುಪ ಮತ್ತು ಪೂರ್ಣಿಮಾ ಅಭಿಪ್ರಾಯ ಹಂಚಿಕೊಂಡರು. ವಿದ್ಯಾರ್ಥಿಗಳಾದ ರೋಶನ್ ಸ್ವಾಗತಿಸಿ, ಕಾರ್ತಿಕ್ ವಿ. ಎಂ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ದೀಪಿಕಾ ಶೆಟ್ಟಿ ವಂದಿಸಿದರು

Comments are closed.