ಕರಾವಳಿ

ಸ್ಯಾಮ್ ಪೀಟರ್ ಸಂಚು ಪ್ರಕರಣ : ರಾಘವೇಂದ್ರ ತೀರ್ಥರ ವಿರುದ್ಧ ಕ್ರಮಕ್ಕೆ ಜಿ.ಎಸ್.ಬಿ.ದೇವಳಗಳ ಒಕ್ಕೂಟದ ಆಗ್ರಹ

Pinterest LinkedIn Tumblr

ಮಂಗಳೂರು: ತನ್ನನ್ನು ಶ್ರೀ ಕಾಶೀಮಠ ಸಂಸ್ಥಾನದ ಪೀಠಾಧಿಪತಿಯನ್ನಾಗಿಸಬೇಕು. ಅದಕ್ಕಾಗಿ ಹಾಲಿ ಮಠಾಧೀಶರು ಮತ್ತು ಅವರ ಬೆಂಬಲಿಗರನ್ನು ಬೆದರಿಸಿ ಈ ಕೆಲಸ ಸಾಧಿಸುವಂತೆ ರಾಘವೇಂದ್ರ ತೀರ್ಥ ಅಲಿಯಾಸ್ ಶಿವಾನಂದ ಪೈ ಮತ್ತು ಅವರನ್ನು ಬೆಂಬಲಿಸಿ ಉಡುಪಿಯ ಉಡುಪಿಯ ರಾಮಚಂದ್ರ ನಾಯಕ್ ತನ್ನನ್ನು ಸಂಪರ್ಕಿಸಿದ್ದರು ಎಂದು ಪೋಲೀಸ್ ವಿಚಾರಣೆಯಲ್ಲಿ ಬಂಧಿತ ಕೇರಳ ಮೂಲದ ಸ್ಯಾಮ್ ಪೀಟರ್ ಹೇಳಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ.

ಕೇಂದ್ರ ಅಪರಾಧ ತನಿಖಾದಳದ ಸಂಸ್ಥೆಯ ಹೆಸರು ಬಳಸಿ ಅಧಿಕಾರಿಗಳ ಸೋಗಿನಲ್ಲಿ ಕಾನೂನು ಬಾಹಿರ ಕೃತ್ಯಕ್ಕೆ ಹೊಂಚುಹಾಕುತ್ತಿದ್ದ ಕೇರಳ ಮೂಲದ ಸ್ಯಾಮ್ ಪೀಟರ್ ಹಾಗೂ ಇತರ ಏಳು ಮಂದಿ ಬಂಧಿತರು ವಿಚಾರಣೆಯ ವೇಳೆಗೆ ಸ್ಯಾಮ್ ಬಹಿರಂಗಗೊಳಿಸಿರುವ ಈ ಸಂಚಿಗೆ ಕಾರಣರಾದ ರಾಘವೇಂದ್ರ ತೀರ್ಥ ಅಲಿಯಾಸ್ ಶಿವಾನಂದ ಪೈ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೋಲೀಸ್ ಆಯುಕ್ತ ಡಾ. ಹರ್ಷ ಅವರನ್ನು ಆಗ್ರಹಿಸುವುದಾಗಿ ಜಿ.ಎಸ್.ಬಿ. ದೇವಳಗಳ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಕಾಮತ್ ಹೇಳಿದ್ದಾರೆ.

ಗುರುವಾರ ಸಂಜೆ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಅವಮಾನಕಾರಿ ವಿಷಯವನ್ನು ಜಿ.ಎಸ್.ಬಿ. ಸಮಾಜ ಖಂಡಿಸುತ್ತದೆ ಎಂದವರು ಹೇಳಿದರು.

ಶ್ರೀ ಕಾಶೀಮಠಾಧೀಶರಾಗಿದ್ದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು 1989ರಲ್ಲಿ ಎರ್ನಾಕುಲಂನ ಶಿವಾನಂದ ಪೈಯವರಿಗೆ ಸನ್ಯಾಸ ದೀಕ್ಷೆ ನೀಡಿ ರಾಘವೇಂದ್ರ ತೀರ್ಥರೆಂದು ನಾಮಕರಣ ಮಾಡಿದ್ದರು. ಮುಂದೆ 1994ರ ಎಪ್ರಿಲ್ 4ರ ರಾಯಸದಲ್ಲಿ ಅದೇ ವರ್ಷ ಡಿಸೆಂಬರ್ 12ರಿಂದ ಅನ್ವಯಿಸುವಂತೆ ರಾಘವೇಂದ್ರ ತೀರ್ಥರ ಕರ್ತವ್ಯವನ್ನು ಸೂಚಿಸಿ ಮಠದ ಆರಾಧ್ಯ ಮೂರ್ತಿಗಳ ಸಹಿತ ಚಿನ್ನಾಭರಣ ಸೊತ್ತುಗಳನ್ನು ಒದಗಿಸಿದ್ದರು. ಆದರೆ ಸಂಸ್ಥಾನದ ಕರ್ತವ್ಯ ನಿರ್ವಹಣೆಗೆ ಕಷ್ಟವಾಗುತ್ತಿರುವುದರಿಂದ ನಮ್ಮನ್ನು ಕರ್ತವ್ಯದಿಂದ ವಿಮುಕ್ತರನ್ನಾಗಿಸಿ ಎಂದ ರಾಘವೇಂದ್ರ ತೀರ್ಥರ ನವೆಂಬರ್ 4, 1999ರ ಕೋರಿಕೆಯಂತೆ ನಂತರವೂ ಎಲ್ಲವೂ ಸರಿಹೋಗಬಹುದು ಎಂಬ ನಿರೀಕ್ಷೆ ಹುಸಿಯಾದ ಬಳಿಕ 19.07.2000ದ ರಾಯಸದಲ್ಲಿ ರಾಘವೇಂದ್ರರನ್ನು ಎಲ್ಲ ಕರ್ತವ್ಯಗಳಿಂದ ಗುರು ಸುಧೀಂದ್ರ ತೀರ್ಥರು ವಿಮುಕ್ತರನ್ನಾಗಿಸಿದ್ದರು ಎಂದು ಜಗನ್ನಾಥ ಕಾಮತ್ ವಿವರಿಸಿದರು.

ಅಧಿಕಾರದಿಂದ ವಿಮುಕ್ತರಾದರೂ ರಾಘವೇಂದ್ರರು ಸಂಸ್ಥಾನದ ಆರಾಧ್ಯ ಮೂರ್ತಿಗಳನ್ನು ಚಿನ್ನಾಭರಣ,ಸೊತ್ತುಗಳನ್ನು ಮರಳಿಸದೇ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಅಲ್ಲಿಯೂ ವಿಫಲರಾದಾಗ ಕಾನೂನು ಆದೇಶವನ್ನು ಧಿಕ್ಕರಿಸಿ ತಲೆ ಮರೆಸಿಕೊಂಡಿದ್ದರು. 2011ರಲ್ಲಿ ರಾಘವೇಂದ್ರರು ಪೋಲೀಸರ ವಶವಾದ ಬಳಿಕ 2015ರಲ್ಲಿ ಸುಧೀಂದ್ರ ತೀರ್ಥರು ರಾಘವೇಂದ್ರರನ್ನು ತಮ್ಮ ಉತ್ತರಾಧಿಕಾರಿಯಲ್ಲ ಎಂದು ಘೋಷಿಸಿ ತಮ್ಮ ನೂತನ ಶಿಷ್ಯರಾದ ಸಂಯಮೀಂದ್ರ ತೀರ್ಥರೇ ಸಂಸ್ಥಾನದ ಉತ್ತರಾಧಿಕಾರಿ ಎಂದು ಆದೇಶ ಹೊರಡಿಸಿದ್ದರು.

2016ರಲ್ಲಿ ಗುರು ಸುಧೀಂದ್ರರು ವೃಂದಾವನಸ್ಥರಾದಾಗ ಅವರ ಆದೇಶದಂತೆ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀಕಾಶೀ ಮಠಾಧೀಶರಾಗಿ ಸಂಸ್ಥಾನವನ್ನು ಇದೀಗ ಮುನ್ನಡೆಸುತ್ತಿದ್ದಾರೆ ಎಂದು ಜಗನ್ನಾಥ ಕಾಮತ್ ಹೇಳಿದರು.

ಈ ಬೆಳವಣಿಗೆಗಳಿಂದ ಅಸೂಯೆಗೊಂಡ ರಾಘವೇಂದ್ರರು ಮತ್ತು ಅವರ ಬೆಂಬಲಿಗರು ಕಳೆದ ಎರಡು ದಶಕಗಳಿಂದ ಶ್ರೀ ಸಂಸ್ಥಾನದ ಮಠಾಧೀಶರು, ದೇವಳಗಳ ಟ್ರಸ್ಟಿಗಳು, ಸಂಘ ಸಂಸ್ಥೆಗಳ ಮೇಲೆ ಮೇಲೆ ಇಲ್ಲ ಸಲ್ಲದ ಆರೋಪ, ಸುಳ್ಳು ದಾವೆಗಳಿಗೆ ಮುಂದಾಗಿ ಕಿರುಕುಳ ನೀಡುತ್ತಲೇ ಇದ್ದಾರೆ. ಎಂದು ಕಾಮತ್ ಆಕ್ರೋಶ ವ್ಯಕ್ತಪಡಿಸಿದರು. ರಾಘವೇಂದ್ರರ ವಿರುದ್ಧ ಕಠಿಣ ಕ್ರಮಕ್ಕೆ ಕಮಿಷನರ್ ಅವರಿಗೆ ದೇವಳಗಳ ಒಕ್ಕೂಟದ ಪರವಾಗಿ ಮನವಿಯನ್ನು ಬಳಿಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ , ಮಾಜಿ ಶಾಸಕ ಎನ್ , ಯೋಗೀಶ್ ಭಟ್ , ಒಕ್ಕೂಟದ ಉಪಾಧ್ಯಕ್ಷ ದಿನೇಶ್ ಕಾಮತ್, ಕಾರ್ಯದರ್ಶಿ ಗಣಪತಿ ಪೈ ಜತೆ ಕಾರ್ಯದರ್ಶಿ ಅತುಲ್ ಕುಡ್ವಾ, ಕೋಶಾಧಿಕಾರಿ ಜಿ. ಉಮೇಶ್ ಪೈ, ಕೊಚಿನ್ ತಿರುಮಲ ದೇವಳದ ಜಗನ್ನಾಥ್ ಶೆಣೈ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು,

Comments are closed.