
ಬೆಂಗಳೂರು: ಕೆಲಸಕ್ಕಾಗಿ ಹುಡುಕುತ್ತ, ಕಂಡಕಂಡಲ್ಲಿ ಕೆಲಸವಿದೆಯಾ ಎಂದು ವಿಚಾರಿಸುವ ಹೆಣ್ಣುಮಕ್ಕಳು ತುಸು ಎಚ್ಚರಿಕೆಯಿಂದ ಇರುವುದು ಒಳಿತು. ಯಾಕೆಂದರೆ ಕೆಲಸ ಕೊಡಿಸುವ ನೆಪದಲ್ಲಿ ದರೋಡೆ ಮಾಡುವ ಗ್ಯಾಂಗ್ವೊಂದು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ.
ಬೊಮ್ಮನಹಳ್ಳಿಯಲ್ಲಿ ಒಂದಿಷ್ಟು ಜನ ವಂಚಕರ ಗುಂಪೊಂದು ಇದನ್ನೇ ಫುಲ್ಟೈಮ್ ಕೆಲಸವನ್ನಾಗಿಸಿಕೊಂಡಿದೆ. ಯಾವುದಾದರೂ ಹೆಣ್ಣುಮಕ್ಕಳು, ಗೃಹಿಣಿಯರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ ಎಂಬುದು ಗೊತ್ತಾದರೆ ಸಾಕು. ಅವರ ಹಿಂದೆ ಬೀಳುತ್ತಾರೆ. ಡಿ ಮಾರ್ಟ್ನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿ ಅವರ ಬಳಿಯಿರುವ ಹಣ, ಒಡವೆ ದೋಚುತ್ತಾರೆ.
ಸದ್ಯ ಗೃಹಿಣಿಯೊಬ್ಬರಿಗೆ ಈ ಅನುಭವ ಆಗಿದೆ. ಲಕ್ಷ್ಮೀ ಎಂಬುವರು ಕೆಲಸ ಹುಡುಕುತ್ತಿದ್ದರು. ಅದನ್ನು ತಿಳಿದುಕೊಂಡ ಓರ್ವ ವಂಚಕ ಅವರ ಬಳಿ ಬಂದು ಡಿ ಮಾರ್ಟ್ನಲ್ಲಿ ಕೆಲಸ ಕೊಡಿಸುತ್ತೇನೆ ಎಂದಿದ್ದಾನೆ. ಹಾಗೇ ಆಟೋದಲ್ಲಿಯೇ ಇಂಟರ್ವ್ಯೂಗೆ ಕರೆದುಕೊಂಡು ಹೋಗಿದ್ದಾನೆ. ಮಹಿಳೆ ಸಂದರ್ಶನಕ್ಕೆ ಒಳಗೆ ಹೋಗುವ ವೇಳೆ, ಮಾಂಗಲ್ಯ ಸರ ಕೊಟ್ಟು ಹೋಗಿ. ಅದನ್ನು ಹಾಕಿಕೊಂಡು ಹೋದರೆ ಮ್ಯಾನೇಜರ್ ಕೆಲಸ ಕೊಡಿಸುವುದಿಲ್ಲ ಎಂದು ನಂಬಿಸಿದ್ದಾನೆ. ಒಳ್ಳೆಯವನಂತೆ ಸೋಗು ಹಾಕಿಕೊಂಡಿದ್ದ ಅವನ ಮಾತನ್ನು ನಂಬಿದ ಗೃಹಿಣಿ 25 ಗ್ರಾಂ. ಚಿನ್ನದ ಸರ ಬಿಚ್ಚಿ ಅವನ ಬಳಿ ಕೊಟ್ಟು ಒಳಗೆ ಹೋಗಿದ್ದಾರೆ. ಆದರೆ ಇಂಟರ್ವ್ಯೂ ಮುಗಿಸಿ ಹೊರಬರುವಷ್ಟರಲ್ಲಿ ಆ ಆಟೋಚಾಲಕ ಅಲ್ಲಿರಲಿಲ್ಲ. ತಾಳಿ ಸಮೇತ ಪರಾರಿಯಾಗಿದ್ದ.
ಘಟನೆಯಿಂದ ನೊಂದಿರುವ ಮಹಿಳೆ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಕೂಡ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಇಂಥದ್ದೇ ಪ್ರಕರಣ ಈಗಾಗಲೇ ಎರಡು ಬಾರಿ ನಡೆದಿದ್ದರೂ ಖಾಕಿ ಪಡೆ ಎಚ್ಚೆತ್ತುಕೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
Comments are closed.