ಕರ್ನಾಟಕ

ಮದುವೆಯಾಗಿ 15 ದಿನಕ್ಕೆ ಗೊತ್ತಾಗಿದ್ದು ನಾನು ಹೆಂಡತಿ ಎಂದು!

Pinterest LinkedIn Tumblr


ಧಾರವಾಡ: ಮಹಿಳೆಯೊಬ್ಬಳು ಫೇಸ್‍ಬುಕ್ ಮೂಲಕ ಪ್ರೀತಿ ಮಾಡಿ ಮದುವೆಯಾಗಿದ್ದಳು. ಆದರೆ ಆಕೆಗೆ ಒಂದು ಮಗು ಕರುಣಿಸಿ, ಮಗುವಿನ ಜೊತೆ ಪತಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಧಾರವಾಡದ ಮೆಹಬೂಬನಗರದ ನಿವಾಸಿ ರಾಬಿಯಾ ಮೋಸ ಹೋದ ಮಹಿಳೆ. ಕಳೆದ ಒಂದು ವರ್ಷದ ಹಿಂದೆ ಅದೇ ನಗರದ ಸರಸ್ವತಪೂರದ ಝೈನ್ ಅಡ್ಡೆವಾಲೆ ಎಂಬವನ ಜೊತೆ ಫೇಸ್‍ಬುಕ್ ಮೂಲಕ ಪ್ರೀತಿ ಮಾಡಿದ್ದಳು. ನಂತರ ಮುಂಬೈಯ ಹೋಟೆಲೊಂದರಲ್ಲಿ ಮದುವೆಯೂ ಮಾಡಿಕೊಂಡಿದ್ದಳು.

ಮದುವೆಯಾದ 15 ದಿನದಲ್ಲೇ ಆಕೆಗೆ ಝೈನ್ ಈಗಾಗಲೇ ಎರಡು ಮದುವೆ ಮಾಡಿಕೊಂಡಿದ್ದು, ತಾನು ಆತನನ್ನು ಮೂರನೇ ಮದುವೆ ಆಗಿದ್ದೇನೆ ಎಂದು ಗೊತ್ತಾಗಿದೆ. ನಂತರ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಇತ್ತ ಮಹಿಳೆ ಮನೆಯವರಿಗೆ ಹೇಳದೇ ಮದುವೆ ಮಾಡಿಕೊಂಡಿದ್ದಳು. ಹೀಗಾಗಿ ರಾಬಿಯಾಯ ಕೆಲಸವನ್ನು ತಾನೇ ಮಾಡುವುದಾಗಿ ಹೇಳಿ ಅದನ್ನು ಕೂಡ ಆರೋಪಿ ಪಡೆದುಕೊಂಡಿದ್ದನು.

ಈತನ ಬಗ್ಗೆ ತಿಳಿದು ಇಬ್ಬರು ಪತ್ನಿಯರು ಬಿಟ್ಟು ಹೋಗಿದ್ದರು. ಮೂರನೇ ಮದುವೆ ಮಾಡಿಕೊಂಡವಳಿಗೆ ಒಂದು ಮಗು ಕರುಣಿಸಿ, ಮಗುವಿನ ಜೊತೆಯಲ್ಲೇ ನಾಪತ್ತೆಯಾಗಿದ್ದಾನೆ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದೀಗ ರಾಬಿಯಾ ತನ್ನ ಮಗುವನ್ನ ಪಡೆಯಲು ಹಾಗೂ ತನ್ನ ಪತಿಗೆ ಬುದ್ಧಿ ಕಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಆದರೆ ಏನು ಪ್ರಯೋಜನವಾಗಿಲ್ಲ. ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿಕೊಳ್ಳುವ ಬದಲು ಕರೆಸಿ ಮಾತನಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ರಾಬಿಯ ಹೇಳಿದ್ದಾಳೆ.

ನಮ್ಮ ಮಗಳು ಇಷ್ಟಪಟ್ಟಿದ್ದಾಳೆಂದು ನಾವೇ ಮತ್ತೆ ಅದ್ಧೂರಿಯಾಗಿ ವಿವಾಹ ಮಾಡಿದ್ದೆವು. ಆದರೆ ಅವನ ಕಡೆಯವರು ಯಾರು ಬಂದಿರಲಿಲ್ಲ. ನಾವು ಕೊಟ್ಟ ಹಣದಿಂದಲೇ ಗೋವಾಗೆ ಹೋಗಿದ್ದನು. ನಂತರ ಮತ್ತೆ ಮತ್ತೆ ಹಣ ಕೊಡುವಂತೆ ಮಗಳಿಗೆ ಹಿಂಸೆ ಕೊಡುತ್ತಿದ್ದನು. ಕೊನೆಗೆ ಮನೆಯನ್ನು ಒತ್ತೆಯಿಟ್ಟು ಹಣ ಕೊಟ್ಟೆ. ಈಗ ಮಗು ಜೊತೆ ನಾಪತ್ತೆಯಾಗಿದ್ದಾನೆ. ನಮ್ಮ ಮಗಳ ಮದುವೆಯಾದ ನಂತರ ಆತನಿಗೆ ಈಗಾಗಲೇ ಎರಡು ಮದುವೆಯಾಗಿದೆ ಎಂದು ಗೊತ್ತಾಗಿತ್ತು. ಹೀಗಾಗಿ ಏನು ಮಾಡಲು ಸಾಧ್ಯವಾಗಿಲ್ಲ. ಈಗ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇವೆ ಎಂದು ಯುವತಿಯ ತಾಯಿ ಹೇಳಿದ್ದಾರೆ.

Comments are closed.