
ಮಂಗಳೂರು,ಆ. 08 : ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ವರುಣನ ಆರ್ಭಟ ಜೋರಾಗಿದೆ. ಜೊತೆಗೆ ಭಾರೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಕೆಲವೊಂದು ಅವಘಡಗಳು ಸಂಭವಿಸುತ್ತಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆಗಳಲ್ಲಿ ಬೃಹತ್ ಮರಗಳು ಉರುಳಿ ಬಿದ್ದು ಅಪಾರ ಹಾನಿಯುಂಟಾಗಿದೆ.

ಬೋಳಾರ ಎಮ್ಮೆಕೆರೆ ರಸ್ತೆಯ ಮಾರಿಗುಡಿ ಬಳಿಯ ಮನೆ ಮೇಲೆ ಬೃಹತ್ ಹುಳಿ ಮರ ಹಾಗೂ ತೆಂಗಿನ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ. ಇದು ಸ್ಥಳೀಯ ನಿವಾಸಿ ಅಶೋಕ್ ಶೆಟ್ಟಿ ಎಂಬವರಿಗೆ ಸೇರಿದ ಮನೆಯಾಗಿದ್ದು, ಘಟನೆಯಿಂದ ಸಮಾರು ಎರಡು ಲಕ್ಷ ರೊಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಅಶೋಕ್ ಶೆಟ್ಟಿ ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಮರವನ್ನು ತೆರವುಗೊಳಿಸುರುತ್ತಾರೆ.

ಇದೇ ವೇಳೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೋಳಾರ ಮಾರಿಗುಡಿಯಿಂದ ಮಂಗಳಾದೇವಿಗೆ ಸಾಗುವ ರಸ್ತೆಯಲ್ಲಿ ಬುಗರಿ ಮರವೊಂದು ರಸ್ತೆಗೆ ಬಿದ್ದು ಸಂಚಾರವು ಅಸ್ತವ್ಯಸ್ತಗೊಂಡಿದೆ. ನಂತೂರು ಸಮೀಪ ಕೂಡ ಬೃಹತ್ ಮರವೊಂದು ರಸ್ತೆಗುರುಳಿ ಬಿದ್ದು, ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ನಡೆದಿದೆ. ನಗರದ ಕೆಪಿಟಿಉ ಸಮೀಪದ ಬಾರೇಬೈಲಿನಲ್ಲಿ ಗಾಳಿ ಮಳೆಯ ರಭಸಕ್ಕೆ ಮನೆಯೊಂಡೂ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.
Comments are closed.