
ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕರ್ನಾಟಕ ಕರಾವಳಿ ಹಾಗೂ ಮಲೆನಾಡಿನಲ್ಲೂ ವರುಣನ ಅಬ್ಬರ ತೀವ್ರಗೊಂಡಿದೆ. ಎನ್ಡಿಆರ್ಎಫ್ ಸೇರಿದಂತೆ ರಕ್ಷಣಾ ಪಡೆಗಳು ಜನರನ್ನು ಸುರಕ್ಷಿತ ಸ್ಥಳಗಳತ್ತ ಒಯ್ಯುತ್ತಿದ್ದಾರೆ.
ಅತ್ತ ಉತ್ತರ ಕರ್ನಾಟಕ ಮಳೆಯಿಂದ ತತ್ತರಿಸುತ್ತಿದ್ದರೆ, ಇತ್ತ ದಕ್ಷಿಣ ಕರ್ನಾಟಕವೂ ಮಳೆಯಬ್ಬರದಿಂದ ನಲುಗುತ್ತಿದೆ. ಪ್ರವಾಹದಿಂದ ನಲುಗಿರುವ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾರಚರಣೆ ಮುಂದುವರಿದಿದೆ.
ರಕ್ಷಣಾ ಕಾರ್ಯದಲ್ಲಿ NDRF, SDRF, ಭಾರತೀಯ ಸೇನಾ ಪಡೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಿಂದ ಸಾವಿರಾರು ಜನರ ಸ್ಥಳಾಂತರ ಮಾಡಲಾಗಿದೆ.
ಒಟ್ಟು 21 ತಾಲೂಕುಗಳಲ್ಲಿ 280ಕ್ಕೂ ಅಧಿಕ ಹಳ್ಳಿಗಳು ಪ್ರವಾಹದಿಂದ ಮುಳುಗಿದ್ದು, 80 ರಕ್ಷಣಾ ಕೇಂದ್ರಗಳನ್ನು ತೆರೆದು ರಕ್ಷಣೆ ನೀಡಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 400ಕ್ಕೂ ಅಧಿಕ ಮನೆಗಳು ಹಾನಿಯಾಗಿವೆ.
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಿದ ಸ್ಥಳೀಯರು
ಬಾಗಲಕೋಟೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಘಟಪ್ರಭಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಸೈದಾ ಎಂಬ ಬಾಲಕನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಾಚಣ್ಣ ಕಣಬೂರಿ ಎಂಬವರು ಬಾಲಕನ್ನು ರಕ್ಷಿಸಿದ್ದಾರೆ.
ಗುಡ್ಡದಲ್ಲಿ ಆಶ್ರಯ ಪಡೆದಿದ್ದ ದಂಪತಿ ರಕ್ಷಣೆ
ಗಲಕೋಟೆಯ ಚಿಚಖಂಡಿ ಸೇತುವೆ ಬಳಿ ನೀರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸುವಲ್ಲಿ ಎಸ್ ಡಿಆರ್ ಎಫ್ ಯೋಧರು ಯಶಸ್ವಿ ಯಾಗಿದ್ದಾರೆ. ಜೀರಗಾಳ ಗ್ರಾಮದ ರಮೇಶ ಹಾಗೂ ಸುರೇಶ ಅವರನ್ನು ಯಾಂತ್ರೀಕೃತ ಬೋಟ್ ನಲ್ಲಿ ಕರೆ ತರಲಾಗಿದೆ. ತೋಟದ ಮನೆಯಲ್ಲಿದ್ದ ಮೇವು ತರಲು ಹೋಗಿದ್ದ ಇಬ್ಬರೂ ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ಹೊಲದ ಗುಡ್ಡದಲ್ಲಿ ಆಶ್ರಯ ಪಡೆದಿದ್ದರು.
2 ದಿನ ಮರ ಹತ್ತಿ ಕುಳಿತಿದ್ದ ದಂಪತಿ ರಕ್ಷಣೆ
ಪ್ರವಾಹದಲ್ಲಿ ಸಿಲುಕಿ ಖಬಲಾಪುರ ಗ್ರಾಮದಲ್ಲಿ ಗುರುವಾರ ಮರ ಏರಿ ಕುಳಿತ್ತಿದ್ದ ದಂಪತಿಯನ್ನು 48 ಗಂಟೆಗಳ ಬಳಿಕ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಜಿಪಂ ಸಿಇಒ ಕೆ.ವಿ. ರಾಜೇಂದ್ರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಕಾಡಪ್ಪ ಗಿವಾರಿ, ರತ್ನಬಾಯಿ ಗಿವಾರಿ ದಂಪತಿಯ ರಕ್ಷಣೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಸೈನ್ಯ ಮತ್ತು ಎನ್ ಡಿಆರ್ಎಫ್ ತಂಡ ನಿರಂತರ ಕರ್ಯಾಚರಣೆ ನಡೆಸಿದರು. ಆದರೆ, ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ರಾತ್ರಿ-ಹಗಲು ಮರದಲ್ಲಿ ಮಳೆಯ ಮಧ್ಯೆ ಕಾಲ ಕಳೆದು ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ದಂಪತಿಯನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದೆ.
Comments are closed.