
ಬೆಂಗಳೂರು: ಅಧಿಕಾರವನ್ನು ಕಳೆದುಕೊಂಡ ನಂತರ ಆಡಳಿತ ಪಕ್ಷದ ಮೇಲೆ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಜೆಡಿಎಸ್ ರಾಜ್ಯದ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ಮೈತ್ರಿ ಸರಕಾರವನ್ನು ಕೆಡವಲು ಕಾಂಗ್ರೆಸ್ ಮತ್ತು ಜೆಡಿಎಸ್ನ ಕೆಲವು ಅತೃಪ್ತ ಶಾಸಕರನ್ನು ತ್ವರಿತಗತಿಯಲ್ಲಿ ಮುಂಬೈಗೆ ಕಳುಹಿಸಲು ವಿಶೇಷ ವ್ಯವಸ್ಥೆ ಕಲ್ಪಿಸಿದವರಿಗೆ ಪ್ರವಾಹದಲ್ಲಿ ಸಿಲುಕಿರುವ ಜನತೆಯ ರಕ್ಷಣೆಗೆ ಒಂದು ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿಲ್ಲ. ರಾಜ್ಯ ಸರಕಾರ ಇನ್ನೂ ಸೇನಾ ಹೆಲಿಕಾಪ್ಟರ್ ನೆರವನ್ನು ಕೇಳದೆ ಇರುವುದು ದುರಾದೃಷ್ಟಕರ ಎಂದು ಜೆಡಿಎಸ್ ಯಡಿಯೂರಪ್ಪ ಸರಕಾರದ ವಿರುದ್ಧ ಕೆಂಡಕಾರಿದೆ.
ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ!
ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ!#KarnatakaFloods
— Janata Dal Secular (@JanataDal_S) August 8, 2019
ಅತೃಪ್ತ ಶಾಸಕರಿಗೆ ಮುಂಬೆನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದ ಬಿಜೆಪಿ ನಾಯಕರು ಆಡಳಿತದಲ್ಲಿದ್ದರು ಪ್ರವಾಹದಲ್ಲಿ ಸಿಲುಕಿದ ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ ಎಂದು ಜೆಡಿಎಸ್ ಟ್ವೀಟರ್ ಮೂಲಕ ವಿಷಾದ ವ್ಯಕ್ತ ಪಡಿಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ಭಾರಿ ಮಳೆ, ಸಂಕಷ್ಟದ ಸ್ಥಿತಿಯಿರುವಾಗ ಸಂಪುಟ ವಿಸ್ತರಣೆಗೆ ಸಂಬಂಧಿಸಿ ದಿಲ್ಲಿ ನಾಯಕರೊಂದಿಗೆ ಚರ್ಚೆ ನಡೆಸಲು ತೆರಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಜೆಡಿಎಸ್ ತೀವ್ರ ಟೀಕೆ ಮಾಡಿತ್ತು. ರೋಮ್ಗೆ ಬೆಂಕಿ ಬಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎನ್ನುವ ಮೂಲಕ ಯಡಿಯೂರಪ್ಪ ಅವರನ್ನು ರೋಮ್ ದೊರೆ ನೀರೋಗೆ ಹೋಲಿಸಿತ್ತು.
Comments are closed.