
ನವದೆಹಲಿ: ಸ್ಪೀಕರ್ ರಮೇಶ್ ಕುಮಾರ್ ಮುಲಾಜು ನೋಡದೇ ರಾಜೀನಾಮೆ ನೀಡಿದ್ದ ಶಾಸಕರನ್ನು ಅನರ್ಹಗೊಳಿಸಿದ ನಂತರ ಇಂದು ಜೆಡಿಎಸ್ ಮಾಜಿ ಅಧ್ಯಕ್ಷ ಎ ಎಚ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು. “ಅತೃಪ್ತ ಶಾಸಕರು ಎನ್ನುವುದು ಮಾಧ್ಯಮಗಳ ವ್ಯಾಖ್ಯಾನ. ನಾವು ಕೌಟುಂಬಿಕ ರಾಜಕಾರಣದ ವಿರುದ್ಧ ಧಂಗೆ ಎದ್ದವರು ನಾವು,” ಎಂದಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅನರ್ಹ ಶಾಸಕ ಹೆಚ್. ವಿಶ್ವನಾಥ್ “ಸಂಸಾರಕ್ಕೊಂದು ಸರ್ಕಾರ ಇರಬಾರದೆಂದು ಎದ್ದು ಬಂದವರು ನಾವು, ನಾನಿನ್ನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ನಾನು ಹಿಂದೆ ಎಲ್ಲಾ ಪಕ್ಷದಲ್ಲಿಯೂ ಈ ಬಗ್ಗೆ ಮಾತನಾಡಿದ್ದೇನೆ. ಎಲ್ಲಾ ಮುಖ್ಯಮಂತ್ರಿಗಳ ಬಗ್ಗೆಯೂ ಮಾತನಾಡಿದ್ದೇನೆ. ಮುಂದೆ ಬಿಜೆಪಿ ಬಗ್ಗೆಯೂ ಮಾತನಾಡುತ್ತೇನೆ. ಮುಂದೆ ಕಾನೂನು ಸಮರ ಮಾಡುತ್ತೇವೆ,” ಎಂದು ಹೇಳಿದರು.
ವಿಶ್ವನಾಥ್ ಜತೆಗಿದ್ದ ಅನರ್ಹಗೊಂಡಿರುವ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ಸುಪ್ರೀಂ ಕೋರ್ಟಿನಲ್ಲಿ ತಮಗೆ ನ್ಯಾಯ ಸಿಗುವ ವಿಶ್ವಾಸ ಪ್ರದರ್ಶಿಸಿದರು. “ನಮ್ಮ ರಾಜೀನಾಮೆ ಅಂಗೀಕಾರವಾಗಲಿದೆ, ತುಂಬ ವಿಳಂಬವಾಗುವುದಿಲ್ಲ ಎನ್ನುವ ವಿಶ್ವಾಸ ನಮ್ಮೆಲ್ಲರಿಗೂ ಇದೆ. ನಮ್ಮನ್ನು ಕಾನೂನು ಬಾಹಿರವಾಗಿ ಅನರ್ಹಗೊಳಿಸಿದ್ದಾರೆ,” ಎಂದು ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದರು.
ಇನ್ನೊಬ್ಬ ಅನರ್ಹಗೊಂಡಿರುವ ಶಾಸಕ ಬಿ.ಸಿ. ಪಾಟೀಲ್ ಮಾತನಾಡಿ, ಸ್ಪೀಕರ್ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು. “ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ದೂರು ಸಲ್ಲಿಸಲಿದ್ದೇವೆ, ಒಂದೆರಡು ದಿನಗಳಲ್ಲಿ ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಸುಪ್ರೀಂ ತೀರ್ಪಿನ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ,” ಎಂದು ಬಿ.ಸಿ. ಪಾಟೀಲ್ ತಿಳಿಸಿದರು.
ಒಟ್ಟಿನಲ್ಲಿ ಬಿಎಸ್ ಯಡಿಯೂರಪ್ಪ ಅವರ ಜತೆಗೇ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದ ಅತೃಪ್ತ ಶಾಸಕರೆಲ್ಲರ ಭವಿಷ್ಯವೂ ಈಗ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಿರ್ಧರಿತವಾಗಿದೆ. ಒಂದು ವೇಳೆ ಸ್ಪೀಕರ್ ನೀಡಿದ ನಿರ್ಣಯವನ್ನು ಸುಪ್ರೀಂ ಎತ್ತಿ ಹಿಡಿದರೆ, 15ನೇ ವಿಧಾನಸಭೆಯಿಂದ ಸಂಪೂರ್ಣವಾಗಿ ಅನರ್ಹಗೊಂಡ ಶಾಸಕರು ದೂರ ಉಳಿಯಬೇಕಾಗುತ್ತದೆ. ಯಡಿಯೂರಪ್ಪ ಉಳಿದ ಮೂರು ವರ್ಷ 8 ತಿಂಗಳ ಅಧಿಕಾರದಲ್ಲಿ ಉಳಿದಿದ್ದೇ ಆದಲ್ಲಿ, ಉಪಚುನಾವಣೆಯಲ್ಲೂ ಅತೃಪ್ತರು ಸ್ಪರ್ಧಿಸುವಂತಿಲ್ಲ. ಆಗ ಸರ್ಕಾರ ಬಿದ್ದು ಮರು ಚುನಾವಣೆಯಾಗಲಿ ಅಥವಾ ರಾಷ್ಟ್ರಪತಿ ಆಳ್ವಿಕೆ ಬಂದು ಮತ್ತೆ ಚುನಾವಣೆ ಆಗಲಿ ಎಂದು ಅತೃಪ್ತರು ಕಾಯುತ್ತಾ ಕುಳಿತಿರಬೇಕು.
ಸುಪ್ರೀಂ ಕೋರ್ಟ್ ಸ್ಪೀಕರ್ ನಿರ್ಣಯವನ್ನು ತಳ್ಳಿಹಾಕಿ ರಾಜೀನಾಮೆ ಅಂಗೀಕರಿಸುವಂತೆ ಸೂಚಿಸಿದರೆ ಮಾತ್ರ ಮತ್ತೆ ಚುನಾವಣೆಗೆ ನಿಂತು ಈ 17 ಜನ ಮತ್ತೆ ಶಾಸಕರಾಗಿ ಆಯ್ಕೆಯಾಗಿ ಬರುವ ಅವಕಾಶ ಹೊಂದುತ್ತಾರೆ. ಇಲ್ಲವಾದರೆ, ಮಾಜಿಮುಖ್ಯಮಂತ್ರಿಗಳಾದ ಎಚ್ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹೇಳಿದಂತೆ ರಾಜಕೀಯ ಜೀವನ ಹಾಳಾಗಿ ಬೀದಿಗೆ ಬರಬೇಕಾಗುತ್ತದೆ ಎಂದು ಅವಲೋಕಿಸುತ್ತಾರೆ ರಾಜಕೀಯ ತಜ್ಞರೊಬ್ಬರು.
Comments are closed.