
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿರುವ ಹೇಳಿಕೆ ಮಾತೊಂದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಮುಜುಗರ ಉಂಟು ಮಾಡುವಂತಿದೆ.
ಸಾಹೋರ್ನಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ನಮ್ಮ ಪ್ರದೇಶ ಸ್ವಚ್ಛವಾಗಿಲ್ಲ. ಈ ಬಗ್ಗೆ ಗಮನಕೊಡುವವರೇ ಇಲ್ಲ ಎಂದು ಹೇಳಿದಾಗ ಪ್ರತಿಕ್ರಿಯೆ ನೀಡಿದ ಪ್ರಜ್ಞಾ ಸಿಂಗ್ ಠಾಕೂರ್, ನಾವು ಚುನಾವಣೆಯಲ್ಲಿ ಗೆದ್ದಿದ್ದು ನಿಮ್ಮ ಮನೆಯ ಶೌಚಗೃಹ, ಚರಂಡಿ ಸ್ವಚ್ಛ ಮಾಡುವುದಕ್ಕಲ್ಲ. ಅದನ್ನು ಅರ್ಥ ಮಾಡಿಕೊಳ್ಳಿ. ನಾವೇನು ಕೆಲಸ ಮಾಡಬೇಕೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಇದನ್ನು ಮೊದಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ ಎಂದಿದ್ದಾರೆ. ಈ ಮಾತಿಗೆ ಟೀಕೆ ವ್ಯಕ್ತವಾಗಿದ್ದು ಸಾಧ್ವಿಯವರದ್ದು ಅಹಂಕಾರ ಎಂಬಂತಹ ಪ್ರತಿಕ್ರಿಯೆ ಕೇಳಿಬರುತ್ತಿದೆ.
ಸ್ಥಳೀಯ ಜನಪ್ರತಿನಿಧಿಗಳು, ಶಾಸಕರ ಜತೆ ನಾವು ಸಂಸದರು ಕೋ-ಆರ್ಡಿನೇಟ್ ಮಾಡಿಕೊಂಡು ಕೆಲಸ ಮಾಡುತ್ತೇವೆ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕೋ ಅದನ್ನು ಮಾಡಲು ಒಟ್ಟಾಗಿ ಶ್ರಮಿಸುತ್ತೇವೆ. ನಿಮ್ಮ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿ ಬಗೆಹರಿಸಿಕೊಳ್ಳಿ. ಪ್ರತಿಯೊಂದಕ್ಕೂ ನನಗೆ ಫೋನ್ ಮಾಡುವುದನ್ನು ಬಿಡಿ ಎಂದು ಹೇಳಿದ್ದಾರೆ. ಪ್ರಜ್ಞಾ ಸಿಂಗ್ ಅವರ ಈ ಮಾತಿಗೆ ವಿರೋಧ ಪಕ್ಷಗಳೂ ಕಿಡಿಕಾರುತ್ತಿವೆ.
Comments are closed.