
ರಾಜಕೀಯ ಮೇಲಾಟಗಳಲ್ಲಿ ಮುಳುಗಿರುವ ಮೂರು ಪಕ್ಷಗಳಿಗೆ ರಾಜ್ಯಪಾಲ ವಜೂಬಾಯಿ ವಾಲಾ ಸಖತ್ ಶಾಕ್ ನೀಡಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟುಗಳ ಬಗ್ಗೆ ರಾಜ್ಯಪಾಲರು ರಾಷ್ಟ್ರಪತಿಗೆ ಪತ್ರ ಬರೆದಿದ್ದು, ರಾಜಕೀಯ ಹೈಡ್ರಾಮಾಗಳು ಕೇಂದ್ರದ ಅಂಗಳವನ್ನು ತಲುಪಿದೆ.
ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ, ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿದೆ. 16 MLA ಗಳು ರಾಜೀನಾಮೆ ನೀಡಿದ್ದಾರೆ, ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತ ಕಳೆದುಕೊಂಡರೂ ಹೆಚ್ಡಿಕೆ ಸರ್ಕಾರ ಆಡಳಿತಾತ್ಮಕ ನಿರ್ಣಯ ಮಾಡ್ತಿದೆ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.
ಅಲ್ಲದೇ ಸರ್ಕಾರ ಈಗಲೂ ಟೆಂಡರ್ಗಳನ್ನು ಅನುಮೋದಿಸುತ್ತಿದೆ, ಹಣಕಾಸು ಬಿಡುಗಡೆ ಮಾಡುತ್ತಿದೆ. IAS,IPS ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡುತ್ತಿದೆ. ಸರ್ಕಾರ ಅಲ್ಪಮತಕ್ಕೆ ಕುಸಿದಿರೋದ್ರಿಂದ ವಿಧಾನಸಭೆಯನ್ನು ಅಮಾನತಿನಲ್ಲಿ ಇಡಬಹುದು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಇದು ಸೂಕ್ತ ಕಾಲ. ಕೂಡಲೇ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಬಹುದು ಎಂದಿದ್ದಾರೆ.
ವಿಧಾನಸಭೆ ವಿಸರ್ಜನೆ ಬದಲು ವಿಧಾನಸಭೆಯನ್ನು ಅಮಾನತಿನಲ್ಲಿ ಇಡಬಹುದು ಎಂಬ ಮಹತ್ವದ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ನಿನ್ನೆಯೇ ರಾಜ್ಯಪಾಲರು ರವಾನಿಸಿದ್ದಾರೆ. ವಿಧಾನಸಭೆ ಅಮಾನತಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದು, ಗೃಹ ಸಚಿವ ಅಮಿತ್ ಶಾ ಟೇಬಲ್ ಮುಂದೆ ರಾಜ್ಯದ ಭವಿಷ್ಯ ಇದೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ಮಾತ್ರ ಸರ್ಕಾರ ಉಳಿಸಿಕೊಳ್ಳುವ ಸರ್ಕಸ್ ಮುಂದುವರೆದಿದೆ.
Comments are closed.