
ಕಾರ್‌ಸ್ಟ್ರೀಟ್‌ನಲ್ಲಿ ಜನ ಔಷಧಿ ಕೇಂದ್ರ ಶುಭಾರಂಭ
ಮಂಗಳೂರು, ಜುಲೈ.15: ಬಡವರಿಗೆ ಎಟಕುವ ಬೆಲೆಗಳಲ್ಲಿ ಔಷಧಿಗಳು ಲಭ್ಯವಿರುವಂತಾಗಬೇಕು. ಔಷಧಿ ಕೊರತೆಯಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು, ಎಂಬ ಉದ್ದೇಶದಿಂದ ದೇಶದಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅತೀ ಕಡಿಮೆ ಬೆಲೆಗಳಲ್ಲಿ ಔಷಧಿ ದೊರೆಯುವ ಜನ ಔಷಧಿ ಕೇಂದ್ರಗಳಲ್ಲಿ ಔಷಧಿ ಖರೀದಿಸುವ ಮೂಲಕ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಕರೆ ನೀಡಿದರು.
ಅವರು ನಗರದ ರಥಭೀದಿ ( ಕಾರ್‌ಸ್ಟ್ರೀಟ್) ಶ್ರೀ ವೆಂಕಟರಮಣ ದೇವಸ್ಥಾನದ ಸಮೀಪವಿರುವ ಪ್ರೆಸಿಡೆನ್ಸಿ ಕಟ್ಟಡದಲ್ಲಿ ನೂತನವಾಗಿ ಪ್ರಾರಾಂಭಿಸಲಾದ ಜನ ಔಷಧಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ದುಬಾರಿ ಬೆಲೆಯ ಔಷದಿಗಳನ್ನು ಖರೀದಿಸಲು ಸಾಧ್ಯವಾಗದೇ ಸಂಕಷ್ಟಪಡುತ್ತಿರುವ ಬಡವರ್ಗದ ಜನತೆ ಇಂತಹ ಜನ ಔಷಧಿ ಮಳಿಗೆಗಳಲ್ಲಿ ಔಷದಿಗಳನ್ನು ಖರೀದಿಸಲು ಮುಂದೆ ಬರಬೇಕು. ಈ ಬಗ್ಗೆ ಇನ್ನೂ ಹಲವರಿಗೆ ಸರಿಯಾದ ಮಾಹಿತಿಯಿಲ್ಲ. ಈ ನಿಟ್ಟಿನಲ್ಲಿ ಕೆಲವು ವೈದ್ಯರು ಕೂಡ ಬಡವರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಜನ ಔಷಧಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದವರು ಹೇಳಿದರು.

ಉರ್ವಾ ಚರ್ಚ್‌ನ ಧರ್ಮಗುರು ರೆ| ಫಾ| ಸ್ಟ್ಯಾನಿ ಪಿರೇರಾ ಪ್ರಾರ್ಥಿಸಿದರು. ಸೆಂಟ್ರಲ್ ಮಾರ್ಕೇಟ್ ಸಮೀಪದ ಸಿಟಿ ಮಸ್ಜೀದ್‌ನ ಧರ್ಮಗುರು ಎಮ್.ಕೆ ಮೊಹಿದ್ಧೀನ್ ಮದನ್ ದು:ವಾಗೈದರು.

ನಗರದ ಸ್ವರ್ಣೋದ್ಯಮಿ ಆಶೋಕ್ ಶೇಟ್ ಅತಿಥಿಗಳಾಗಿದ್ದರು. ಪ್ರಮುಖರಾದ ಅಬೂ ಶಕೀಲ್ ಆಹಮ್ಮದ್, ಜಾನ್ ಡಿ’ಸೋಜ ಸಾರಾಮ್ಮ, ಜೂಲಿಯಾನ್, ಜುಬೇದ, ಸನತ್, ಸೌಮ್ಯ, ನವೀನ್, ಕಿಶೋರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜನ ಔಷಧಿ ಕೇಂದ್ರದ ಪಾಲುದಾರರಾದ ಮೆಲ್ವೀನ್ ಡಿ’ಸೋಜ ಸ್ವಾಗತಿಸಿದರು. ಇನ್ನೋರ್ವ ಪಾಲುದಾರ ಅಬ್ದುಲ್ ಅಜೀಜ್ ವಂದಿಸಿದರು.
Comments are closed.