
ಮಂಗಳೂರು: ಸಮಾಜ, ಮಠ ಹಾಗೂ ದೇವಸ್ಥಾನಗಳು ಒಟ್ಟು ಸೇರಿ ಕೆಲಸ ಮಾಡಿದರೆ ಕಷ್ಟವಾದುದನ್ನು ಸಾಧಿಸಬಹುದು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪರಮಪೂಜ್ಯ ಜಗದ್ಗುರು ಅನಂತಶ್ರಿವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದ ಮೂಲಕ ಭಕ್ತರನ್ನು ಹುರಿದುಂಬಿಸಿದರು.
ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವಿನಾಯಕ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದಂತಹ ವಿಕಾರಿ ನಾಮ ಸಂವತ್ಸರದ ೧೫ನೇ ಚಾತುರ್ಮಾಸ್ಯ ವ್ರಚಾರಣೆಯ ಅಂಗವಾಗಿ ಎರಡನೇ ದಿನದ ಕೊನೆಯ ದೇವಳ ಭೇಟಿಯಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಈ ಹಿಂದೆ ನಡೆದಂತಹ ಪ್ರವಾಚನದಲ್ಲಿ ನಡೆದಂತಹ ಘಟನೆಯನ್ನು ಮೆಲುಕು ಹಾಕುತ್ತಾ, ಮೈಕ್ ಕೈ ಕೊಟ್ಟರೆ ಏನೆಲ್ಲ ಅಪಭಂಶ್ರಗಳು ನಡೆಯುತ್ತವೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು.
ಕಟಪಾಡಿಯಲ್ಲಿ ಮಠ ನಿರ್ಮಾಣದ ಬಗ್ಗೆ ವಿಚಾರ ವಿನಿಮಯ ಮಾಡಿದ ಶ್ರೀಗಳು, ಮಠದ ಬೆಳವಣಿಗೆಯಲ್ಲಿ ಮಂಗಳೂರು ದೇವಸ್ಥಾನ ಕೊಟ್ಟಂತಹ ಕೊಡುಗೆ ಬಹಳ ಅಪಾರ ಎಂದು ಬಣ್ಣಿಸಿದರು. ಮೊದಲು ನಮ್ಮ ಮಠ, ಸನ್ನಿಧಿ ಇದ್ದದ್ದು ಕೋ-ಆಪರೇಟಿವ್ ಸೊಸೈಟಿ ಆಕ್ಟ್ ಅಡಿಯಲ್ಲಿ. ನಂತರ ಅದನ್ನು ಟ್ರಸ್ಟ್ ಅಡಿಯಲ್ಲಿ ತಂದು ಸಂಸ್ಥೆ ಮಾಡಬೇಕು ಎನ್ನುವುದು ಮುಂದಾಲೋಚನೆ ಆಗಿತ್ತು. ಅದಕ್ಕೆ ಪೂರಕವಾಗಿ ಮಠದ ಅಭಿವೃದ್ದಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಅಂದು ಇದ್ದಂತಹ ಸಮಿತಿಯನ್ನು ಬರ್ಕಸ್ತು ಮಾಡಿ ಹೊಸ ಸಮಿತಿಯನ್ನು ರಚಿಸಲಾಯಿತು.
ಅಲ್ಲದೇ, ಇದಕ್ಕೆಲ್ಲಾ ಸಂಚಲನ ಮೂಡಿದ್ದು ಮಠದಲ್ಲಿಯೇ ಹಾಗೂ ಮಂಗಳೂರು ದೇವಸ್ಥಾನಕ್ಕೆ ಮೊಕ್ತೇಸರರಾಗಿ ಕೇಶವ ಆಚಾರ್ಯ ಆಯ್ಕೆ ಆದ ಬಳಿಕ. ತದನಂತರದ ದಿನಗಳಲ್ಲಿ ಶ್ರೀಗಳ ಪಟ್ಟಾಭಿಷೇಕ ಆಗಬೇಕೆನ್ನುವುದು ಸಮಿತಿಯ ಆಶಯವಾಗಿತ್ತು. `ನಾಭೂತೋ’ ಅನ್ನುವ ಮಟ್ಟಿಗೆ ಮಾಡಿ ತೋರಿಸಿದರು. ಮಠ ನಿರ್ಮಿಸಿ ಕೊಟ್ಟಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಾಭಿಷೇಕ ಸಂದರ್ಭ ನಡೆದಿದ್ದಂತಹ ಘಟನೆಗಳನ್ನು ಶ್ರೀಗಳು ವಿವರಿಸಲು ಮೆರೆಯಲಿಲ್ಲ.
ಮಠದ ನಿರ್ಮಾಣಕ್ಕೆ ಬಗ್ಗೆ ಶ್ರಮಿಸಿದ ವ್ಯಕ್ತಿಗಳನ್ನು ಉಲ್ಲೇಖಿಸುತ್ತಾ, ಮಠದ ಒಟ್ಟಿಗೆ ಗುರುಕುಲವೂ ಬೇಕು ಎಂದು ನಿಟ್ಟಿನಲ್ಲಿ ಶ್ರೀಮಠದಲ್ಲಿ ನಾಗ ಧರ್ಮೇಂದ್ರ ಸ್ವಾಮೀಜಿ ವೇದ ಸಂಜೀವಿನಿಯನ್ನು ಹಳೆಯಂಗಡಿ ಸೂರ್ಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಇದೀಗ ಕರಾವಳಿ ಭಾಗದಲ್ಲಿ ಮಠದ ಜೊತೆಗೆ ವೇದಧ್ಯಾಯನ ಆರಂಭವಾಗಿರುವುದು ಮೊದಲ ಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವೇದ ಸಂಸ್ಕಾರದ ಒಟ್ಟಿಗೆ ಲೌಕಿಕ ಶಿಕ್ಷಣವನ್ನೂ ನೀಡುವ ನಿಟ್ಟಿನಲ್ಲಿ 7, 8, 9, 10ನೇ ತರಗತಿಯ ವಿದ್ಯಾರ್ಥಿಗಳನ್ನು ಕಟಪಾಡಿ ಮಠದಲ್ಲಿ ಇರಿಸಿದ ಕಾಲೋಚಿತ ಸೂಕ್ತಗಳನ್ನು ಮಠವು ನೀಡುತ್ತಿವೆ.
ಒಂದು ಕೈಯಲ್ಲಿರುವ ಐದು ಬೆರಳುಗಳು ಬೇರೆ ಬೇರೆ ರೀತಿಯಲ್ಲಿ ಇದೆ. ಯಾವುದೇ ಕೆಲಸ ಮಾಡುವಾಗ ಎಲ್ಲಾ ಬೆರಳುಗಳು ಒಟ್ಟಿಗೆ ಸೇರುವಾಗ ಅದರ ಅಂತರ ಕಡಿಮೆಯಾಗಿ ಕೆಲಸ ಸುಗಮ ವಾಗುತ್ತದೆಯೋ ಅದೇ ರೀತಿ,ಜೀರ್ಣೋದ್ಧಾರದಲ್ಲಿ ಎಲ್ಲರೂ ಒಟ್ಟಾಗಿ ದುಡಿದು ಕೆಲಸವನ್ನು ಯಶಸ್ವಿಗೊಳಿಸಿ ಬೇರೆ ದೇವಸ್ಥಾನಕ್ಕೆ ಮಾದರಿ ಆಗಬೇಕು ಎಂದು ಹೇಳಿದರು.
ರಥಬೀದಿ ಎಂದರೆ ಕೇವಲ ಬೀದಿ ಮಾತ್ರವಾಗಿರದೆ, ರಥವನ್ನೂ ಎಳೆಯುವ ಬೀದಿಯಾಗಬೇಕು. ಈ ನಿಟ್ಟಿಯಲ್ಲಿ ಬ್ರಹ್ಮ ರಥವಾಗಬೇಕು ಎನ್ನುವ ಅಧ್ಯಕ್ಷರ ಆಶಯವನ್ನು ವಿಶ್ಲೇಷಿದ ಶ್ರೀಗಳು, ಶೀಘ್ರವಾಗಿ ಅವರ ಆಸೆಯಂತೆ ಇತರರ ಭಕ್ತಿಯಿಂದ ಬ್ರಹ್ಮರಥವದ ಕನಸನ್ನು ತಾಯಿ ಕಾಳಿಕಾಂಬೆ ಆದಷ್ಟು ಬೇಗ ನನಸು ಮಾಡಲಿ ಎಂದು ಆಶಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನ್ ಟ್ರಸ್ಟ್, ಇದೀಗ ‘ಆನೆಗುಂದಿ ಸಮಾಜ ಸೇವಾ ಎಜ್ಯುಕೇಶನ್ ಟ್ರಸ್ಟ್ (ಎಸ್ಸೆಟ್) ಎನ್ನುವ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಂದನೇ ಮೊಕ್ತೇಸರರಾದ ಕೇಶವ ಆಚಾರ್ಯ, ಎರಡನೇ ಮೊಕ್ತೇಸರರು, ಸುಂದರ್ ಆಚಾರ್ಯ, ಮೂರನೇ ಮೊಕ್ತೇಸರಾದ ಲೋಕೇಶ್ ಆಚಾರ್ಯ ಹಾಗೂ ಬೊಳ್ಳೂರು ಸೂರ್ಯಕುಮಾರ್, ತ್ರಾಸಿ ಪ್ರಭಾಕರ ಆಚಾರ್ಯ ಹಾಗೂ ಅಲೆವೂರು ಯೋಗೀಶ್ ಆಚಾರ್ಯ ಉಪಸ್ಥಿತರಿದ್ದರು. ಸುಂದರ್ ಆಚಾರ್ಯ ಸ್ವಾಗತಿಸಿದರು, ಚಾತುರ್ಮಾಸ್ಯ ಸಮಿತಿಯ ಗಂಗಾಧರ್ ಆಚಾರ್ಯ ಚಾತುರ್ಮಾಸ್ಯದ ಬಗ್ಗೆ ವಿವರಣೆ ನೀಡಿದರು. ವಿನೋದ್ ಸುಜೀರ್ ಕಾರ್ಯಕ್ರಮ ನಿರೂಪಿಸಿದರು.
Comments are closed.