
ಮಂಗಳೂರು, ಜೂನ್.27: ಮಂಗಳೂರಿನ ಹಲವು ಜ್ಯುವೆಲ್ಲರಿ ಮಳಿಗೆಗಳಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಬುಧವಾರ ದಾಳಿ ಆರಂಭಿಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರವೂ ಕಡತಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ.
ನಗರದ ಕಂಕನಾಡಿ ಬಳಿ ಇರುವ ಚಿನ್ನಾಭರಣ ಮಳಿಗೆಗಳಾದ ಸುಲ್ತಾನ್ ಗೋಲ್ಡ್, ಹಾಗೂ ಸಿಟಿ ಗೋಲ್ಡ್ ಮೇಲೆ ಬುಧವಾರ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಖಾಸಗಿ ವಾಹನಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ಮಂಗಳೂರು, ಸುಳ್ಯ, ಉಪ್ಪಳ, ಕಾಸರಗೋಡು ಮತ್ತಿತರ ಕಡೆಯ ಹಲವು ಜ್ಯುವೆಲ್ಲರಿ ಅಂಗಡಿಗಳಿಗೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರವೂ ದಾಳಿ ಮುಂದುವರಿದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಸುಲ್ತಾನ್ ಗೋಲ್ಡ್ ಶಾಖೆಯೂ ರಾಜ್ಯದ ನಾಲ್ಕು ಕಡೆಗಳಲ್ಲಿದ್ದು, ಮಂಗಳೂರು, ಉಡುಪಿ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ ಶಾಖೆಯ ಮೇಲೆ ಏಕಾಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಕೇರಳದ ಉದ್ಯಮಿ ರವೂಫ್ ಸುಲ್ತಾನ್ ಗೋಲ್ಡ್ ನ ಮಾಲೀಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಐಟಿ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಗ್ರಾಹಕರು ಎಂದಿನಂತೆ ಚಿನ್ನಾಭರಣಗಳ ಖರೀದಿಗಾಗಿ ಜ್ಯುವೆಲ್ಲರಿ ಅಂಗಡಿಯ ಬಳಿ ಬಂದು ಬರಿಗೈಯಲ್ಲಿ ಮರಳುತ್ತಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments are closed.