ರಾಷ್ಟ್ರೀಯ

ತವರಿಗೆ ಹೋಗುತ್ತೇನೆಂದ ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ!

Pinterest LinkedIn Tumblr


ಲಕ್ನೋ: ತವರಿಗೆ ಹೋಗುತ್ತೇನೆಂದು ಹೇಳಿದ ಪತ್ನಿಯ ಮೇಲೆ ಸಿಟ್ಟಿಗೆದ್ದ ಪತಿಯೊಬ್ಬ ಆಕೆಯ ಮೂಗನ್ನೇ ಕಚ್ಚಿ ತುಂಡು ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ಆರತಿ ಹಾಗೂ ಆರೋಪಿಯನ್ನು ಕುಮಾರ್ ಎಂದು ಗುರುತಿಸಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಪ್ರತಿ ದಿನ ಪತಿ ಕುಡಿದು ಬಂದು ಪತ್ನಿಗೆ ಹಿಂಸೆ ಕೊಡುತ್ತಿದ್ದನು. ಆದರೆ ಇದನ್ನು ಪತ್ನಿ ಸಹಿಸಿಕೊಂಡು ಆತನ ಜೊತೆಗೆ ಹೇಗೋ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು.

ಪತ್ನಿ ಪಕ್ಕದೂರಿನಲ್ಲಿರುವ ತನ್ನ ತವರಿಗೆ ಹೋಗಿ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಪತಿ ಬಳಿ ಹೇಳಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಸೋಮವಾರ ಬೆಳಗ್ಗೆ ಜಗಳವಾಗಿತ್ತು. ಈ ವೇಳೆ ಕೋಪಗೊಂಡ ಪತಿರಾಯ ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ತುಂಡಾಗಿರುವ ಮೂಗನ್ನು ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಬಹುದಿತ್ತು, ಆದರೆ ತುಂಡಾದ ಮೂಗಿನ ಭಾಗ ಲಭ್ಯವಾಗದ ಹಿನ್ನೆಲೆ ಮೂಗನ್ನು ಜೋಡಿಸಲು ಆಗಿಲ್ಲ. ಆರತಿಗೆ ಈಗ ಕೃತಕ ಮೂಗನ್ನು ಅಳವಡಿಸಬಹುದು. ಆದರೆ ಅದು ಬಹಳ ದುಬಾರಿ ಪ್ರಕ್ರಿಯೆ ಆಗಿರುವುದರಿಂದ ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸದ್ಯ ಈ ಸಂಬಂಧ ಪ್ರಕರಣ ದಾಖಲಿಕೊಂಡ ಪೊಲೀಸರು ದಂಪತಿಯ ನೆರೆಹೊರೆಯವರನ್ನು ವಿಚಾರಣೆ ನಡೆಸಿದ್ದು, ಆರೋಪಿಯನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.

Comments are closed.