
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರದಲ್ಲಿ ನಟಿಸುತ್ತಿರುವ ದೀಪಿಕಾ ತಮ್ಮ ಪ್ರಿಯಕರನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಬಗ್ಗೆ ಸ್ವತಃ ದೀಪಿಕಾ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ದೀಪಿಕಾ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಆಕರ್ಶ್ ಅವರನ್ನು ಬಹಳ ದಿನದಿಂದಲೂ ಪ್ರೀತಿ ಮಾಡುತ್ತಿದ್ದರು. ಈಗ ಅವರು ಅಕ್ಕು ಆಕರ್ಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಿಶ್ಚಿತಾರ್ಥ ಫೋಟೋ ಹಾಕಿ ದೀಪಿಕಾ ಅದಕ್ಕೆ, “ನಮ್ಮ ಲವ್ ಸ್ಟೋರಿಯ ಉತ್ತಮ ಭಾಗವೆಂದರೆ ಅದು ನನ್ನ ಹಾಗೂ ನಿಮ್ಮ ಹೃದಯದ ನಿಶ್ಚಿತಾರ್ಥ. ನಾನು ನಿಮ್ಮನ್ನು ಮೊದಲನೇ ಬಾರಿ ನೋಡಿದ್ದಾಗ ಪ್ರೀತಿಸಲು ಶುರು ಮಾಡಿದೆ. ನಾನು ನಿಮ್ಮನ್ನು ಪ್ರೀತಿಸುವ ವಿಷಯ ಮೊದಲೇ ಗೊತ್ತಿದ್ದರಿಂದ ನೀವು ಮುಗುಳು ನಕ್ಕಿದ್ದೀರಿ. ನೀವು ಎಲ್ಲ ಸಮಯದಲ್ಲೂ ನನ್ನ ಜೊತೆಯಲ್ಲಿ ಇದ್ದೀರಾ. ನಾನು ನಿಮಗೆ ಒಳ್ಳೆಯ ಜೀವನ ಸಂಗಾತಿ ಆಗಿ ಇರುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ದೀಪಿಕಾ ಅಲ್ಲದೆ ಅಕ್ಕು ಆಕರ್ಶ್ ಕೂಡ, “ಹೌದು. ನಾವು ಈಗ ಎಂಗೇಜ್ ಆಗಿದ್ದೇವೆ. ಇದು ನಾವಿಬ್ಬರು ಜೊತೆಯಲ್ಲಿ ಇರುವ ಮೊದಲ ನೆನಪು ಹಾಗೂ ಆ ಉಂಗುರದ ಜೊತೆ ನಾನು ನನ್ನ ಹೃದಯವನ್ನು ನಿನಗೆ ನೀಡಿದ್ದೇನೆ. ನೀನು ಎಂದಿಗೂ ಒಬ್ಬಂಟಿಯಾಗಿ ನಡೆಯಲು ನಾನು ಬಿಡುವುದಿಲ್ಲ. ನನ್ನ ಹೃದಯ ನಿನಗೆ ನೆರಳಾಗಿ ಇರುತ್ತದೆ. ನನ್ನ ತೋಳುಗಳು ನಿನಗೆ ಮನೆಯಾಗಿಯಾಗಿ ಇರುತ್ತದೆ. ನಿನ್ನ ಜೊತೆ ಇಡೀ ಜೀವನ ಕಳೆಯಲು ನಾನು ಅದೃಷ್ಟ ಮಾಡಿದೆ” ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ದೀಪಿಕಾ “ಇದು ನಮ್ಮಿಬ್ಬರ ಮೊದಲ ಫೋಟೋವಾಗಿದ್ದು, ಇವರ ಜೊತೆ ಏಳು ಜನ್ಮದಲ್ಲೂ ಏಳು ಹೆಜ್ಜೆಗಳನ್ನು ಇಡುತ್ತೇನೆ” ಎಂದು ಬರೆದು ತಮ್ಮ ಮತ್ತು ಅಕ್ಕು ಆಕರ್ಶ್ ಪೇಂಟಿಂಗ್ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಇನ್ನೊಂದು ಫೋಟೋ ಪೋಸ್ಟ್ ಮಾಡಿ ಅದರಲ್ಲಿ “ನೀನು ನನಗೆ ಪ್ರತಿದಿನದ ಸೂರ್ಯ ಇದ್ದಂತೆ. ನನ್ನ ಹೃದಯ ನಿನಗೆ ಸೋತಿದೆ” ಎಂದು ಹೇಳಿಕೊಂಡಿದ್ದರು.
Comments are closed.