
ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯಲ್ಲಿನ ಮಸೀದಿಯಲ್ಲಿ ಆಶ್ರಯ ಪಡೆದಿದ್ದ ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಹಿದ್ದೀನ್ ಬಾಂಗ್ಲದೇಶ್ ಸಂಘಟನೆ ಉಗ್ರಗಾಮಿ ಸದಸ್ಯನನ್ನು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಬಂಧಿಸಿದೆ.
ಬಂಧಿತನನ್ನು ಅಬಿಬುಲ್ಲಾ ರೆಹಮಾನ್ (30) ಎಂದು ಗುರುತಿಸಲಾಗಿದೆ.
2014ರಲ್ಲಿ ಬಿಹಾರದ ಬುದ್ದಗಯಾ ಸಮೀದ ನಗರದಲ್ಲಿ ಬಾಂಬ್ ತಯಾರಿಕೆ ಸಂದರ್ಭದಲ್ಲಿಯೇ ಬಾಂಬ್ ಸ್ಪೋಟಗೊಂಡು ಇಬ್ಬರು ಮೃತಪಟ್ಟು, ಸುಮಾರು 40 ಜನ ಗಾಯಗೊಂಡಿದ್ದರು.
ಬಾಂಬ್ ತಯಾರಿಕೆಯಲ್ಲಿ ಭಾಗಿಯಾಗಿದ್ದ ಬಾಂಗ್ಲದೇಶದ ಅಬಿಬುಲ್ಲಾ ರೆಹಮಾನ್ ಅಂದಿನಿಂದಲೂ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕಾಗಿ ಎನ್‌ಐಎ ತಂಡ ಸತತ ಐದು ವರ್ಷಗಳಿಂದಲು ಶೋಧನೆಯಲ್ಲಿ ತೊಡಗಿತ್ತು ಎಂದು ಪೊಲೀಸ್ ಮೂಲಗಳು ತಿಳಿವೆ.
ನಗರದಲ್ಲಿ ಉಗ್ರನಿಗೆ ಆಶ್ರಯ ನೀಡಿದ್ದ ಮೌಲ್ವಿ ಅನ್ವರ್ ಹುಸೇನ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ಉಗ್ರ ಅಬಿಬುಲ್ಲಾ ರೆಹಮಾನ್ ನನ್ನು ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲು ಅಸ್ಸಾಂ ಹಾಗೂ ಬೆಂಗಳೂರು ಎನ್‌ಐಎ ತಂಡದ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಎರಡು ವಾರದ ಹಿಂದಷ್ಟೇ ಆಗಮಿಸಿದ್ದ ಉಗ್ರ ಮಸೀದಿಯಲ್ಲಿ ಆಶ್ರಯ ಪಡೆದಿದ್ದ. ಇತ್ತೀಚೆಗಷ್ಟೆ ಒಂದು ಬೆಡ್ ರೂಂನ ಮನೆ ನೋಡಿಕೊಂಡಿದ್ದು ಅಡ್ವಾನ್ಸ್ ನೀಡಿದ್ದ. ಇನ್ನೇನೂ ಮನೆಗೆ ವಾಸ್ತವ್ಯ ಬದಲಿಸಬೇಕೆನ್ನುವಷ್ಟರಲ್ಲಿ ಎನ್ ಐಎ ಬಲೆಗೆ ಬಿದ್ದಿದ್ದಾನೆ.
Comments are closed.