
‘ಐ ಲವ್ ಯೂ’ ಸಿನಿಮಾದಲ್ಲಿ ನಾನು ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರಿಂದ ನನ್ನಪ್ಪ- ಅಮ್ಮನಿಗೆ ಬಹಳ ನೋವಾಗಿದೆ. ಅವರು ಈಗಲೂ ನನ್ನನ್ನು ಚಿಕ್ಕ ಮಗುವಿನಂತೆಯೇ ನೋಡಿಕೊಳ್ಳುತ್ತಾರೆ. ನಾನು ತೆರೆಯ ಮೇಲೆ ಈ ರೀತಿ ಕಾಣಿಸಿಕೊಂಡಿದ್ದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ‘Sorry’ ಹೊರತು ಅವರಿಗೆ ಬೇರೇನೂ ಹೇಳಲು ನನಗೆ ಸಾಧ್ಯವಿಲ್ಲ ಎಂದು ಕೆಲ ದಿನಗಳ ಹಿಂದೆ ನಟಿ ರಚಿತಾ ರಾಮ್ ಕಣ್ಣೀರು ಹಾಕಿದ್ದರು.
ಈ ಸಿನಿಮಾದಲ್ಲಿ ಉಪೇಂದ್ರ- ರಚಿತಾ ಬಹಳ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಚಿತ್ರದಲ್ಲಿನ ‘ಮಾತನಾಡಿ ಮಾಯವಾದೆ’ ಹಾಡಿನಲ್ಲಿ ಡಿಂಪಲ್ ಕ್ವೀನ್ ಹಸಿಬಿಸಿಯಾಗಿ ಕಾಣಿಸಿ ಪಡ್ಡೆಗಳ ಮೈ ಬಿಸಿ ಹೆಚ್ಚಿಸಿದ್ದರು. ಹಾಡಿನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ರಚಿತಾ ಬಗ್ಗೆ ಕೆಲವರು ಅಸಮಾಧಾನವನ್ನೂ ಹೊರಹಾಕಿದ್ದರು. ಇದೇ ವಿಚಾರಕ್ಕೆ ಪ್ರಿಯಾಂಕಾ ಉಪೇಂದ್ರ ಕೂಡ ಮುನಿಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ, ಆ ದೃಶ್ಯ ಸಿನಿಮಾಗೆ ಅಗತ್ಯವಾಗಿದ್ದರಿಂದ ಚಿತ್ರೀಕರಿಸಲಾಯಿತು ಎಂದು ರಚಿತಾ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ತಮ್ಮ ಪಾತ್ರದ ಬಗ್ಗೆ ನ್ಯೂಸ್18 ಕನ್ನಡ ಸ್ಟುಡಿಯೋದಲ್ಲಿ ಮನಬಿಚ್ಚಿ ಮಾತನಾಡಿದ್ದ ರಚಿತಾ ರಾಮ್, ತಮ್ಮ ಕುಟುಂಬದವರು ಆ ಸಿನಿಮಾ ನೋಡಿ ಬಂದಾಗ ಬೇಸರಿಸಿಕೊಂಡಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ನಾನು ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮೊದಲೇ ಅಪ್ಪ-ಅಮ್ಮನಿಗೆ ಹೇಳಿದ್ದೆ. ಆದರೆ, ಮಾತು ಬೇರೆ, ತೆರೆಯಲ್ಲಿ ನೋಡೋದು ಬೇರೆ. ಹೀಗಾಗಿ, ಸಿನಿಮಾಗೆ ಹೋಗಿದ್ದ ಅಮ್ಮ ಬಹಳ ಬೇಸರಿಸಿಕೊಂಡಿದ್ದರು. ಅದಕ್ಕಾಗಿ ಇನ್ನು ಇಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಅಪ್ಪ, ಅಮ್ಮನ ಬಳಿ ಕ್ಷಮೆಯನ್ನೂ ಕೇಳಿದ್ದೆ. ಇನ್ನೆಂದೂ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ರಚಿತಾ ರಾಮ್ ಹೇಳಿದ್ದರು.
ಈ ಬಗ್ಗೆ ‘ಐ ಲವ್ ಯೂ’ ಚಿತ್ರದ ನಾಯಕ ನಟ ಉಪೇಂದ್ರ ಪ್ರತಿಕ್ರಿಯಿಸಿದ್ದು, ರಚಿತಾ ರಾಮ್ ಅಂತದೊಂದು ಪಾತ್ರವನ್ನು ಇದೇ ಮೊದಲ ಬಾರಿ ಮಾಡಿದ್ದಾರೆ. ಎಲ್ಲರೂ ಅವರ ರೋಲ್ ಅನ್ನು ಇಷ್ಟಪಡುತ್ತಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ಸಹ ಮೆಚ್ಚಿಕೊಂಡಿದ್ದಾರೆ, ಅವರ ತಾಯಿಯೇ ಹೊಗಳಿದ್ದಾರೆ. ಅವರ ತಂದೆಯವರಿಗೆ ನೋವಾಗಿದೆ ಎಂದು ರಚಿತಾ ಹೇಳಿದ್ದಾರೆ. ಅವರಿಗೂ ಗೊತ್ತಿದೆ, ಸಿನಿಮಾ ಬೇರೆ ಮತ್ತು ಜೀವನ ಬೇರೆ ಎಂಬುದು. ಕಲಾವಿದರು ಎಂದಾಗ ಕೆಲ ಸನ್ನಿವೇಶಗಳು ಬರುತ್ತವೆ. ನಿಜವಾಗಲೂ ಅವರಿಗೆ ಇಷ್ಟವಿಲ್ಲದಿದ್ದರೆ ಆಗಲೇ ಅವರು ಹೇಳಬಹುದಿತ್ತು ಎಂದು ರಿಯಲ್ ಸ್ಟಾರ್ ಹೇಳಿದರು.
ತುಂಬಾ ದೊಡ್ಡ ದೊಡ್ಡ ಕಲಾವಿದರೇ ಎಂತೆಂಥಾ ಪಾತ್ರಗಳನ್ನು ಮಾಡಿದ್ದಾರೆ. ಇದು ಕೂಡ ಹಾಗೆಯೇ, ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಇದನ್ನು ದೊಡ್ಡ ವಿಷಯವಾಗಿ ಮಾಡುವ ಅವಶ್ಯಕತೆಯಿಲ್ಲ. ಹಾಗೆಯೇ ಎಲ್ಲರೂ ಫ್ಯಾಮಿಲಿಯಾಗಿ ಚಿತ್ರವನ್ನು ನೋಡಿ ಎಂದು ಉಪೇಂದ್ರ ಮನವಿ ಮಾಡಿದರು.
ಅಷ್ಟೇ ಅಲ್ಲದೆ ರಚಿತಾ ರಾಮ್ ವಿರುದ್ಧ ಪ್ರಿಯಾಂಕಾ ಉಪೇಂದ್ರ ಸಿಟ್ಟಾಗಿರಲಿಲ್ಲ ಎಂದು ತಿಳಿಸಿದ ಉಪ್ಪಿ, ಡಿಂಪಲ್ ಕ್ವೀನ್ ಯಾವುದೋ ಸಂದರ್ಶನದಲ್ಲಿ ಉಪೇಂದ್ರ ಅವರ ಅಣತಿಯಂತೆ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದರು. ಇದನ್ನು ಪ್ರಸ್ತಾಪಿಸಿ ಕೊರಿಯಾಗ್ರಾಫರ್, ನಿರ್ದೇಶಕರು ಇರುವಾಗ ಉಪೇಂದ್ರ ಯಾಕೆ ಆ್ಯಕ್ಷನ್ ಕಟ್ ಹೇಳುತ್ತಾರೆ ಎಂಬಾರ್ಥದಲ್ಲಿ ಪ್ರಿಯಾಂಕಾ ಪ್ರಶ್ನಿಸಿದ್ದರು ಎಂದು ಉಪ್ಪಿ ಸಮಜಾಯಿಷಿ ನೀಡಿದರು. ಇದೇ ವೇಳೆ ‘ಪ್ರಜಾಕೀಯ’ ಎಂಬ ಚಿತ್ರದೊಂದಿಗೆ ಮತ್ತೆ ಡೈರೆಕ್ಷನ್ಗೆ ಮರಳುವುದಾಗಿ ಉಪೇಂದ್ರ ತಿಳಿಸಿದ್ದು, ಇದಕ್ಕಾಗಿ ಭರದ ಸಿದ್ದತೆಗಳು ನಡೆಯುತ್ತಿರುವುದಾಗಿ ತಮ್ಮ ಮುಂದಿನ ಕನಸಿನ ಸಿನಿಮಾ ಬಗ್ಗೆ ಹೇಳಿಕೊಂಡರು.
Comments are closed.