
ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇಂದು ಮಾಡಿರುವ ಆರೋಪಗಳು ಆರೋಗ್ಯಕರವಲ್ಲ. ಅದರಲ್ಲೂ ಸರ್ಕಾರೇತರ ವೈಯಕ್ತಿಕ ವಿಷಯಗಳ ಬಗ್ಗೆ ಮಾಡಿರುವ ಪ್ರಸ್ತಾಪಗಳು ಕೀಳು ಅಭಿರುಚಿಯಿಂದ ಕೂಡಿವೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಬಿಎಸ್ವೈ ಆರೋಪ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಸಿಎಂ ಎಚ್ಡಿಕೆ ಸ್ಪಷ್ಟೀಕರಣ ನೀಡಿದ್ದಾರೆ. ರಾಜ್ಯವು ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದರೂ, ರಾಜ್ಯದ ಜನತೆಗೆ ಅಗತ್ಯವಾದ ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯ ಇಡೀ ಆಡಳಿತ ಯಂತ್ರ ಸನ್ನದ್ಧವಾಗಿದೆ. ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಬರ ನಿರ್ವಹಣೆಯಲ್ಲಿ ಪ್ರತಿ ದಿನ ಪರಿಶೀಲನೆ ನಡೆಸುತ್ತಿದ್ದು, ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪರಿಹಾರ ಕಾರ್ಯಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ವಿಕೋಪ ನಿರ್ವಹಣೆಗಾಗಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಒಟ್ಟು 620 ಕೋಟಿ ರೂ. ಲಭ್ಯವಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯು 201.5 ಕೋಟಿ ರೂ. ಹಾಗೂ ನಗರಾಭಿವೃದ್ಧಿ ಇಲಾಖೆಯು 50 ಕೋಟಿ ರೂ. ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಖ್ಯ ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಿ ಜಿಲ್ಲೆಗಳ ಬರ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿ, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಬರ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ್ದ ಬಿಎಸ್ವೈಗೆ ಪ್ರತ್ಯುತ್ತರ ನೀಡಿದ್ದಾರೆ.
ರೈತರ ಸಾಲ ಮನ್ನಾ
ರೈತರ ಬೆಳೆ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗಿದೆ. ಸರ್ಕಾರ ನಿಗದಿ ಪಡಿಸಿದ ಮಾರ್ಗಸೂಚಿಗಳನ್ವಯ ಎಲ್ಲ ಅರ್ಹ ರೈತರಿಗೆ ಸಾಲ ಮನ್ನಾ ಸೌಲಭ್ಯ ಒದಗಿಸಲಾಗಿದೆ. ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲು ಉದ್ದೇಶಿಸಿದ್ದ ಈ ಯೋಜನೆಯನ್ನು ಆರ್ಥಿಕ ಶಿಸ್ತಿನ ಇತಿಮಿತಿಯೊಳಗೆ ಒಂದೇ ವರ್ಷದೊಳಗೆ ಪೂರ್ಣಗೊಳಿಸಲಾಗುತ್ತಿದೆ.
ಆರಂಭದಲ್ಲಿ ಬ್ಯಾಂಕುಗಳು ನೀಡಿದ ಮಾಹಿತಿಯನ್ವಯ ಸಾಲ ಮನ್ನಾ ಮೊತ್ತ 48,000 ಕೋಟಿ ರೂ. ಗಳಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸರ್ಕಾರದ ಮಾರ್ಗಸೂಚಿಯ ವ್ಯಾಪ್ತಿಯಲ್ಲಿ ಬರುವ ರೈತರ ಸಂಖ್ಯೆ 30 ಲಕ್ಷ ಹಾಗೂ ಬೆಳೆ ಸಾಲ ಮನ್ನಾ ಮೊತ್ತ ಅಂದಾಜು 16,000 ಕೋಟಿ ರೂ. ಗಳೆಂದು ಗುರುತಿಸಲಾಗಿದೆ. ಇದರಲ್ಲಿ ಈಗಾಗಲೇ 23 ಲಕ್ಷ ರೈತರು ದಾಖಲೆಗಳನ್ನು ಒದಗಿಸಿದ್ದು, 12830 ಕೋಟಿ ರೂ. ಸಾಲ ಮನ್ನಾ ಮೊತ್ತವನ್ನು ನೇರವಾಗಿ ರೈತರ ಸಾಲ ಖಾತೆಗೆ ಬಿಡುಗಡೆ ಮಾಡಲಾಗುತ್ತಿದೆ. ಇದೇ ಜುಲೈ ಅಂತ್ಯದೊಳಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರವೂ ಯಾರಾದರೂ ಅರ್ಹ ರೈತರು ಮನವಿ ಸಲ್ಲಿಸಿದಲ್ಲಿ ಸಾಲ ಮನ್ನಾ ಮಾಡಲು ಸರ್ಕಾರ ಸಿದ್ಧವಿದೆ. ಸಾಲ ಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬ್ಯಾಂಕರುಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾಲ ಮನ್ನಾ ತೆರೆದ ಪುಸ್ತಕವಿದ್ದಂತೆ. ಮಾನ್ಯ ಯಡಿಯೂರಪ್ಪನವರೂ ಸಹ ಎಲ್ಲ ಮಾಹಿತಿಯನ್ನು clws.karnataka.gov.in ವೆಬ್ ಸೈಟಿನಲ್ಲಿ ಪಡೆದುಕೊಳ್ಳಬಹುದು. ಸಾಲ ಮನ್ನಾ ಯೋಜನೆಯ ಕುರಿತು ಪ್ರತಿಪಕ್ಷದ ನಾಯಕರು ಬಾಯಿ ಚಪಲಕ್ಕೆ ಉದ್ಘರಿಸುವ ಮಾತುಗಳಿಂದ ಅವರು ರೈತರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ; ಇಲ್ಲದ ಗೊಂದಲ ಸೃಷ್ಟಿಸಲೂ ಸಾಧ್ಯವಿಲ್ಲ. ಸಾಲ ಮನ್ನಾ ಸೌಲಭ್ಯ ಎಲ್ಲ ಅರ್ಹ ರೈತರಿಗೂ ಒದಗಿಸುವುದನ್ನು ನಮ್ಮ ಸರ್ಕಾರ ಖಾತರಿ ಪಡಿಸಿದೆ ಎಂದು ಸ್ಪಷ್ಟಪಡಿಸಿದರು.
ಐಎಂಎ ಹಗರಣ
ಐಎಂಎ ಹಗರಣ ಕುರಿತು ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಎಸ್ಐಟಿ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಮಾನ್ಯ ಯಡಿಯೂರಪ್ಪನವರ ಬಳಿ ಸರ್ಕಾರದ ಸಚಿವರು, ಶಾಸಕರು ಮತ್ತಿತರರು ಈ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಸೂಕ್ತ ದಾಖಲೆಗಳಿದ್ದರೆ, ಎಸ್ಐಟಿಗೆ ನೀಡಲಿ. ಪ್ರಕರಣವು ತನಿಖಾ ಹಂತದಲ್ಲಿ ಇರುವಾಗ ದಾಖಲೆಗಳಿಲ್ಲದೆ, ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪಿಸಿ, ತನಿಖೆಯ ಹಾದಿ ತಪ್ಪಿಸುವುದು ಸೂಕ್ತವಲ್ಲ ಎಂದರು.
Comments are closed.