
ಹುಬ್ಬಳ್ಳಿ: ಜೆಡಿಎಸ್ ಸಹವಾಸ ಸಾಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜೆಡಿಎಸ್ ಸಹವಾಸದಿಂದಲೇ ಕಾಂಗ್ರೆಸ್ ಗೆ ಹಿನ್ನಡೆ
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಮುಖ್ಯಮಂತ್ರಿ ಮಗ ಸೋತಿದ್ದಾನೆ, ತುಮಕೂರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸೋತಿದ್ದಾರೆ ಹೀಗಾಗಿ ಎಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯ ವಿರುದ್ಧ ನಿತ್ಯ ವಾಗ್ದಾಳಿ ನಡೆಸುತ್ತಿದ್ದಾರೆ. ಜೆಡಿಎಸ್ ಸಹವಾಸ ಸಾಕು. ಜೆಡಿಎಸ್ ಸಹವಾಸದಿಂದಲೇ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ಎಂದು ಸಿದ್ದರಾಮಯ್ಯ ರಾಹುಲ್ ಗೆ ದೂರು ನೀಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಜೆಡಿಎಸ್- ಕಾಂಗ್ರೆಸ್ ನಿತ್ಯ ರಾಜ್ಯವನ್ನು ಲೂಟಿ ಮಾಡುತ್ತಿವೆ
ಇದೇ ವೇಳೆ ನಂತರ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹೊಸ ನಾಟಕ ಶುರುಮಾಡಿದ್ದಾರೆ. ರಾಜ್ಯದ ಜನರನ್ನು ಪದೇ ಪದೇ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಸರ್ಕಾರಕ್ಕೆ ಅಂತ್ಯಕಾಲ ಬಂದಿದೆ. ಗ್ರಾಮ ವಾಸ್ತವ್ಯದಿಂದ ಕುಮಾರಸ್ವಾಮಿ ನೇರ ಮನೆಗೆ ಹೋಗುತ್ತಾರೆ. ಗ್ರಾಮ ವಾಸ್ತವ್ಯದಿಂದ ಜನರ ಕಷ್ಟಗಳಿಗೆ ಸ್ಪಂಧಿಸಲು ಸಾಧ್ಯವಿಲ್ಲ. ಪ್ರತಿ ತಾಲ್ಲೂಕು ಕೇಂದ್ರಗಳಿಗೆ ತೆರಳಿ, ಸಿಎಂ ಅಧಿಕಾರಿಗಳ ಸಭೆ ನಡೆಸಲಿ. ಭೀಕರ ಬರದಿಂದ ರಾಜ್ಯದ ಜನ ತತ್ತರಿಸುತ್ತಿದ್ದಾರೆ. ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಗ್ರಾಮ ವಾಸ್ತವ್ಯದ ನಾಟಕ. ಜೆಡಿಎಸ್- ಕಾಂಗ್ರೆಸ್ ನಿತ್ಯ ರಾಜ್ಯವನ್ನು ಲೂಟಿ ಮಾಡುತ್ತಿವೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
Comments are closed.