1
ಬೆಂಗಳೂರು(ಜೂನ್ 17): ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರು ಆರೋಪಿ ಮನ್ಸೂರ್ ಖಾನ್ ಅವರನ್ನು ತಮ್ಮ ಬಳಿ ಕರೆದುಕೊಂಡು ಬಂದಿದ್ದರು ಎಂದು ಸಚಿವ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ದೇಶಪಾಂಡೆ, ನಮ್ಮ ಬಳಿ ರೋಷನ್ ಬಂದಿದ್ದು ನಿಜ. ಅದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದು ಹೇಳಿದರು.
ಮನ್ಸೂರ್ ನಮ್ಮ ಕ್ಷೇತ್ರದವರು. ಇವರು ಶಾಲೆಗಳನ್ನು ನಡೆಸುತ್ತಿದ್ದಾರೆ. ಒಳ್ಳೆಯ ವ್ಯಕ್ತಿ ಎಂದು ಮನ್ಸೂರ್ ಅವರನ್ನು ರೋಷನ್ ಬೇಗ್ ತಮಗೆ ಪರಿಚಯಿಸಿದರು ಎಂದು ಆರ್.ವಿ. ದೇಶಪಾಂಡೆ ಹೇಳಿದರು.
ಮನ್ಸೂರ್ ಅವರ ಸಂಸ್ಥೆಗೆ ಒಂದು ಸಣ್ಣ ಸಮಸ್ಯೆ ಇದೆ. ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿರುವ ಕಾರಣ ಯಾವುದೇ ವ್ಯವಹಾರ ಆಗುತ್ತಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ರೋಷನ್ ಬೇಗ್ ಅವರು ತಮ್ಮ ಬಳಿ ನೆರವು ಕೋರಿದ್ದು ನಿಜ ಎಂದು ದೇಶಪಾಂಡೆ ಒಪ್ಪಿಕೊಂಡರು.
ಕಂದಾಯ ಇಲಾಖೆಯಿಂದ ಐಎಂಎಗೆ ಕ್ಲೀನ್ ಚಿಟ್ ಸಿಕ್ಕಿತೆಂಬ ಸುದ್ದಿಯನ್ನು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಇದೇ ವೇಳೆ ತಳ್ಳಿಹಾಕಿದರು.
2018ರ ಮೇ 8ರಂದು ಐಎಂಎ ಸಂಸ್ಥೆಯ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಲು ಆರ್ಬಿಐ ಸೂಚನೆ ನೀಡಿತ್ತು. ಅದರಂತೆ ವಿವಿಧ ಇಲಾಖೆಗಳಿಂದ ಅಭಿಪ್ರಾಯ ಪಡೆದು ಬಳಿಕ ಪೊಲೀಸ್ ಇಲಾಖೆಗೆ ಪರಿಶೀಲನೆ ಮಾಡಲು ಸೂಚನೆ ನೀಡಿದೆವು. ಆದರೆ, ಕರ್ನಾಟಕ ಹಣಕಾಸು ಸಂಸ್ಥೆಯ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ಕೆಪಿಐಡಿ) ಕಾಯ್ದೆ ಅಡಿ ಈ ಸಂಸ್ಥೆಯ ವ್ಯವಹಾರಗಳು ಬರುವುದಿಲ್ಲ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಪಟ್ಟು ವರದಿ ನೀಡಿತು. ಹೀಗಾಗಿ, ಐಎಂಎ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲಿಲ್ಲ. ತಾವಾಗಲೀ, ತಮ್ಮ ಯಾವುದೇ ಇಲಾಖೆಯಾಗಲೀ ಐಎಂಎಗೆ ಕ್ಲೀನ್ ಚಿಟ್ ನೀಡಿಲ್ಲ. ಬಹಳ ಪಾರದರ್ಶಕವಾಗಿ ನಡೆದುಕೊಂಡಿದ್ದೇವೆ ಎಂದು ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು.
ಹೂಡಿಕೆದಾರರು ಠೇವಣಿದಾರರಲ್ಲ ಎಂಬುದನ್ನು ನೀವು ಗಮನಿಸಬೇಕು. ಠೇವಣಿದಾರರು ಆಗಿದ್ದರೆ ಮಾತ್ರ ಕೆಪಿಐಡಿ ಕಾಯ್ದೆ ಅಡಿ ತನಿಖೆ ನಡೆಸಬಹುದು. ಹೀಗಾಗಿ, ಕೆಪಿಐಡಿ ಕಾಯ್ದೆಗೆ ತಿದ್ದುಪಡಿ ತರಲು ಯೋಚಿಸುತ್ತಿದ್ದೇವೆ. ಇದೂವರೆಗೂ ಈ ಕಾಯ್ದೆ ಅಡಿ ಐಎಂಎ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಒಂದು ವೇಳೆ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವರು ಭರವಸೆ ನೀಡಿದರು.
ರೋಷನ್ ಬೇಗ್ ಮೊಬೈಲ್ ಸ್ವಿಚ್ ಆಫ್:
ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಅವರನ್ನ ಕರೆದುಕೊಂಡು ರೋಷನ್ ಬೇಗ್ ತಮ್ಮ ಬಳಿ ಬಂದಿದ್ದರು ಎಂದು ಆರ್.ವಿ. ದೇಶಪಾಂಡೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬೆನ್ನಲ್ಲೇ ರೋಷನ್ ಬೇಗ್ ಅವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಫ್ರೇಜರ್ ಟೌನ್ನಲ್ಲಿರುವ ತಮ್ಮ ನಿವಾಸದಿಂದ ಹೊರಗೆ ತೆರಳಿದ ಮಾಜಿ ಸಚಿವರು ಯಾರ ಪ್ರತಿಕ್ರಿಯೆಗೂ ಸಿಗುತ್ತಿಲ್ಲ.
ಇದೇ ವೇಳೆ, ಕಾಂಗ್ರೆಸ್ ಪಕ್ಷ ಯಾರ ಪರವಾಗಿಯೂ ನಿಲ್ಲಲ್ಲ. ಐಎಂಎ ಹಗರಣದಲ್ಲಿ ಯಾರೇ ಭಾಗಿಯಾದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ. ಮೋಸ ಹೋದವರಿಗೆ ನ್ಯಾಯ ಒದಗಿಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ರಾವ್, ದಿನೇಶ್ ಗುಂಡೂರಾವ್ ಮೊದಲಾದವರ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡಿದ್ದ ರೋಷನ್ ಬೇಗ್ ಅವರ ಕತ್ತಿಗೆ ಈಗ ಐಎಂಎ ಹಗರಣದ ಉರುಳು ಸುತ್ತಿಕೊಳ್ಳುತ್ತಿರುವಂತಿದೆ. ರೋಷನ್ ಬೇಗ್ ತಮ್ಮಿಂದ 400 ಕೋಟಿ ರೂ ಹಣ ಪಡೆದುಕೊಂಡರೆಂದು ಐಎಂಎ ಸಂಸ್ಥೆಯ ಮುಖ್ಯಸ್ಥ ಹಾಗೂ ಹಗರಣದ ಆರೋಪಿ ಮನ್ಸೂರ್ ಖಾನ್ ಹೇಳಿದ್ದರು. ಇದನ್ನು ರೋಷನ್ ಬೇಗ್ ನಿರಾಕರಿಸಿದ್ದರು, ಐಎಂಎ ಸಂಸ್ಥೆಯೊಂದಿಗೆ ಅವರ ನಂಟು ಇರುವುದಕ್ಕೆ ಸಾಕ್ಷ್ಯಗಳು ಸಿಗುತ್ತಿವೆ.
Comments are closed.