ರಾಷ್ಟ್ರೀಯ

ಜೆ.ಪಿ. ನಡ್ಡಾ ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕ

Pinterest LinkedIn Tumblr


ನವದೆಹಲಿ(ಜೂನ್ 17): ಹಿಂದಿನ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಜೆ.ಪಿ. ನಡ್ಡಾ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಬಿಜೆಪಿಯ ಸಂಸದೀಯ ಮಂಡಳಿಲ್ಲಿ ಈ ನೇಮಕಾತಿ ನಡೆದಿದೆ. ಕೆಲವೇ ತಿಂಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ನಡ್ಡಾ ಅವರು ಪೂರ್ಣಪ್ರಮಾಣದಲ್ಲಿ ಅಧ್ಯಕ್ಷರಾಗಿ ನಿಯುಕ್ತಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಅಮಿತ್ ಶಾ ಅವರೇ ಬಿಜೆಪಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಈಗಿನ ಎನ್​ಡಿಎ-2 ಸರ್ಕಾರದಲ್ಲಿ ಅಮಿತ್ ಶಾ ಅವರು ಗೃಹ ಸಚಿವರಾಗಿ ಸಂಪುಟ ಸೇರ್ಪಡೆಯಾದ ಬಳಿಕ ಜೆ.ಪಿ. ನಡ್ಡಾ ಅವರು ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗುವ ನಿರೀಕ್ಷೆಗಳಿದ್ದವು. ಆದರೆ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ ಈ ಮೂರು ರಾಜ್ಯಗಳ ಚುನಾವಣೆಯು ಆ ಪಕ್ಷದ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಈ ಚುನಾವಣೆಗಳು ಮುಗಿಯುವವರೆಗೂ ಪಕ್ಷದ ಚುಕ್ಕಾಣಿ ಹಿಡಿದಿರಲಿದ್ದಾರೆ. ಹಾಗೆಯೇ, 2020ರ ಜನವರಿಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ನಡ್ಡಾ ಅವರೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಹಿಮಾಚಲಪ್ರದೇಶ ಮೂಲದ ಬ್ರಾಹ್ಮಣ ಸಮುದಾಯದ ಜೆ.ಪಿ. ನಡ್ಡಾ(58) ಅವರು ಹಿಂದಿನ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆರೆಸ್ಸೆಸ್ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ನಡ್ಡಾ ಸಂಘಟನಾ ಚತರುರರೂ ಹೌದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜವಾಬ್ದಾರಿಯನ್ನು ನಡ್ಡಾ ಸಮರ್ಥವಾಗಿ ನಿಭಾಯಿಸಿದ್ದರು. ಮಹಾಘಟಬಂಧನ್ ಮೈತ್ರಿಕೂಟದ ತೀವ್ರ ಪ್ರತಿರೋಧದ ನಡುವೆಯೂ ಬಿಜೆಪಿಯು ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 62ರಲ್ಲಿ ಗೆಲುವು ಸಾಧಿಸಲು ಶಕ್ಯವಾಯಿತು. ಈ ಸಾಧನೆಯು ಅವರನ್ನು ಬಿಜೆಪಿಯ ಚುಕ್ಕಾಣಿ ಹಿಡಿಯಲು ಕಾರಣವಾಗಿರಬಹುದು.

Comments are closed.