
ಇತ್ತೀಚಿಗೆ ದೇಶದಾದ್ಯಂತ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ದೇಶದ ಚುಕ್ಕಾಣಿ ಹಿಡಿದಿದೆ. ಈ ಭರ್ಜರಿ ಗೆಲುವಿನ ಬಳಿಕ ಬಿಜೆಪಿ ಹೈಕಮಾಂಡ್ ಬದಲಾವಣೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತಾದರೂ ಇದೀಗ ಬಿಜೆಪಿ ಅತ್ಯಂತ ಜಾಣ ನಡೆ ಪ್ರದರ್ಶಿಸಿದ್ದು, ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ರನ್ನೇ ಮುಂದುವರಿಸುವ ಮುನ್ಸೂಚನೆ ಲಭ್ಯವಾಗಿದೆ.
ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ ಹಾಗೂ ಜಮ್ಮುಕಾಶ್ಮೀರದ ವಿಚಾರದ ಸೇರಿದಂತೆ ಹಲವು ಮಹತ್ವದ ಬೆಳವಣಿಗೆಗಳು ಇರುವ ಕಾರಣ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಬದಲಾಯಿಸದಿರಲು ನಿರ್ಧರಿಸಿದೆ. ಹೀಗಾಗಿ ಡಿಸೆಂಬರ್ ವರೆಗೆ ಅಮಿತ್ ಶಾ ಕೈಯಲ್ಲೇ ಬಿಜೆಪಿ ಚುಕ್ಕಾಣಿ ಇರಲಿದೆ.
ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಕೇವಲ ಕೇಂದ್ರ ಮಾತ್ರವಲ್ಲದೇ ರಾಜ್ಯದಲ್ಲಿ ಕೂಡ ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆಯನ್ನು ಬಿಜೆಪಿ ಸಧ್ಯಕ್ಕೆ ಕೈಬಿಟ್ಟಿದ್ದು, ಯಡಿಯೂರಪ್ಪನವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಲು ಹೈಕಮಾಂಡ್ ತೀರ್ಮಾನಿಸಿದೆ.
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಬದಲಾವಣೆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಈ ವೇಳೆ ಹಾಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಷ್ಟ್ರೀಯ ವಕ್ತಾರ ಜೆ.ಪಿ.ನಡ್ಡಾ ಹೆಸರು ಕೂಡ ಕೇಳಿಬಂದಿತ್ತು.
Comments are closed.