ರಾಷ್ಟ್ರೀಯ

ಆಂಧ್ರ ಪ್ರದೇಶ ರಾಜ್ಯಪಾಲ ಹುದ್ದೆಗೆ ತಮ್ಮನ್ನು ನೇಮಕ ಮಾಡಿಲ್ಲ, ಸುದ್ದಿಗಳು ಶುದ್ದ ಸುಳ್ಳು: ಸುಷ್ಮಾ ಸ್ವರಾಜ್

Pinterest LinkedIn Tumblr

ನವದೆಹಲಿ: ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ತಮ್ಮನ್ನು ನೇಮಕ ಮಾಡಿರುವ ಕುರಿತ ಸುದ್ದಿಗಳು ಶುದ್ದ ಸುಳ್ಳು. ಇದೆಲ್ಲ ಊಹಾಪೋಹ. ರಾಜ್ಯಪಾಲ ಹುದ್ದೆಗೆ ತಮ್ಮನ್ನು ನೇಮಕ ಮಾಡಿಲ್ಲ ಎಂದು ಸುಷ್ಮಾ ಸ್ವರಾಜ್‌ ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸುದ್ದಿಗಳು ವ್ಯಾಪಕವಾಗಿ ಹರಿದಾಡತೊಡಗಿದ ಬೆನ್ನಲ್ಲೇ ಈ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಸುಷ್ಮಾ ಸ್ವರಾಜ್, ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ತಮ್ಮನ್ನು ನೇಮಕ ಮಾಡಿರುವ ಕುರಿತ ಸುದ್ದಿಗಳು ನಿಜವಲ್ಲ, ವಿದೇಶಾಂಗ ಇಲಾಖೆಯಿಂದ ನಿರ್ಗಮಿಸುತ್ತಿರುವ ನಾನು ನನ್ನ ಜಾವಾಬ್ದಾರಿಗಳ ಬಿಡುಗಡೆ ಪ್ರಕ್ರಿಯೆಗಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದೆ. ನಾನು ರಾಜ್ಯಪಾಲೆಯಾಗಿ ನೇಮಕವಾದೆ ಎಂದು ಸುದ್ದಿ ಹರಡಲು ಇಷ್ಟೇ ಸಾಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಸುಳ್ಳು ವೈರಲ್ ಸುದ್ದಿಗೆ ಕೇಂದ್ರ ಸಚಿವರೇ ಕಾರಣ
ಇನ್ನು ಸುಷ್ಮಾ ಸ್ವರಾಜ್‌ ಅವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾರೆ ಸುದ್ದಿ ವೈರಲ್ ಆಗಲು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಡಾ. ಹರ್ಷ ವರ್ಧನ್ ಅವರು ಕಾರಣ ಎನ್ನಲಾಗುತ್ತಿದೆ. ಹರ್ಷ ವರ್ಧನ್ ಅವರು, ‘ನನ್ನ ಸೋದರಿ, ವಿದೇಶಾಂಗ ಇಲಾಖೆಯ ಮಾಜಿ ಸಚಿವೆ ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಸುಷ್ಮಾ ಸ್ವರಾಜ್‌ ಅವರ ಅನುಭವದ ಫಲವನ್ನು ಆ ರಾಜ್ಯದ ಜನ ಪಡೆಯಲಿದ್ದಾರೆ,’ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸುಷ್ಮಾ ಅವರಿಗೆ ವ್ಯಾಪಕ ಅಭಿನಂದನೆಗಳನ್ನು ಸಲ್ಲಿಸಲಾಗಿತ್ತು. ಇನ್ನು ಸುಷ್ಮಾ ಸ್ವರಾಜ್‌ ಅವರು ಇತ್ತ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡುತ್ತಲೇ, ಅತ್ತ ಸಚಿವ ಹರ್ಷವರ್ಧನ ಅವರು ತಮ್ಮ ಅಭಿನಂದನಾ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

ಅನಾರೋಗ್ಯದ ಕಾರಣ ನೀಡಿ ತಾವು ಲೋಕಸಭೆ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಚುನಾವಣೆ ಘೋಷಣೆಗೂ ಮೊದಲೇ ಸುಷ್ಮಾ ಸ್ವರಾಜ್‌ ಹೇಳಿಕೊಂಡಿದ್ದರು. ನಂತರ ಎನ್‌ಡಿಎ–2 ಸರ್ಕಾರದಲ್ಲಿ ಸುಷ್ಮಾ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಭಾವಿಸಲಾಗಿತ್ತು.

Comments are closed.