
ರಾಯಚೂರು: ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಚತ್ತರ ತಾಂಡಾದಲ್ಲಿ ಬರ ಪರಿಶೀಲನೆ ನಡೆಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಹಸೀಲ್ದಾರ್ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಛತ್ತರ ತಾಂಡಾದಲ್ಲಿ ಕುಡಿವ ನೀರು, ಉದ್ಯೋಗ, ನೀಡಿಲ್ಲ ಎಂದು ಗ್ರಾಮಸ್ಥರ ಅಹವಾಲು ನೀಡಿದ್ದು, ಅಹವಾಲು ಸ್ವೀಕರಿಸಿದ ಯಡಿಯೂರಪ್ಪ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು, ಕಪಾಳಕ್ಕೆ ಕೊಡ್ಬೇಕಾ..? ಏನ್ ತಮಾಷೆ ಮಾಡ್ತಿದ್ದೀಯಾ ಎಂದು ಸಿಟ್ಟಿಗೆದ್ದಿದ್ದಾರೆ.
ತದನಂತರ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ, ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದನೆ ಮಾಡದೇ ಇರುವುದರಿಂದ ಹಾಗೇ ಹೇಳಿದೆ.. ನಾನು ಯಾವಾಗಲೂ ಅಧಿಕಾರಿಗಳೊಂದಿಗೆ ಗೌರವದಿಂದ ನಡೆದುಕೊಂಡಿದ್ದೇನೆ.. ಈ ಹಿಂದೆ ಸಿಎಂ ಆಗಿದ್ದ ವೇಳೆ ಕೂಡ ನಾನು ಅಧಿಕಾರಿಗಳೊಂದಿಗೆ ಗೌರವದಿಂದ ನಡೆದುಕೊಂಡಿದ್ದೇನೆ.. ಜನರ ಸಮಸ್ಯೆ ನೋಡಿ ನನಗೆ ನೋವಾಗಿ ಆ ಶಬ್ದ ಉಪಯೋಗಿಸಿದೆ.. ಅಧಿಕಾರಿಗೆ ಹಾಗೇ ಹೇಳಿದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಈ ವೇಳೆ ಮಾತನಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕುಡಿಯುವ ನೀರು ಹಾಗು ಉದ್ಯೋಗ ನೀಡವಲ್ಲಿ ವಿಫಲವಾಗಿದೆ. ರಾಯಚೂರು ಜಿಲ್ಲೆಯ ಛತ್ತರ ತಾಂಡದಲ್ಲಿ ಉದ್ಯೋಗ ನೀಡಿಲ್ಲ. ಇನ್ನೆರಡು ದಿನದಲ್ಲಿ ಉದ್ಯೋಗ ನೀಡಬೇಕು ಎಂದು ಬಿಎಸ್ವೈ ಆಗ್ರಹಿಸಿದ್ದಾರೆ.
ಅಲ್ಲದೇ, ಗ್ರಾಮ ವಾಸ್ತವ್ಯ ಯಾವ ಕಾರಣಕ್ಕೆ ಮಾಡುತ್ತಾರೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದ್ರೂ ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದಾರೆ ಸಿಎಂ. ಕೇವಲ ಶಾಲೆಯಲ್ಲಿ ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದಿದ್ದಾರೆ.
Comments are closed.