
ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾಗಿ ವರ್ಷ ಕಳೆದಿದ್ದರೂ ಕಾಂಗ್ರೆಸ್ನಲ್ಲಿನ ಆಂತರಿಕ ಬೇಗುದಿ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಕಾಂಗ್ರೆಸ್ನಲ್ಲಿ ಬಂಡಾಯ ಏಳುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಸಾಗಿದ್ದು, ಮೊನ್ನೆಯಷ್ಟೇ ರೋಷನ್ ಬೇಗ್ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದರು.
ಇದೀಗ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಹಿತಿ ನೀಡಿದ್ದು, ಸಿದ್ದರಾಮಯ್ಯ ಅಹವಾಲಿಗೆ ರಾಹುಲ್ ತಲೆದೂಗಿದ್ದಾರೆ ಎನ್ನಲಾಗಿದೆ.
ಚುನಾವಣೆ ಫಲಿತಾಂಶದ ಬಳಿಕ ತಮ್ಮನ್ನು ಭೇಟಿಯಾಗಲು ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರಂತೆ.
ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದೆ. ಮೈತ್ರಿ ಮುಂದುವರಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇದ್ದಿದ್ದರೆ ಕನಿಷ್ಠ 15 ಸ್ಥಾನಗಳನ್ನಾದರೂ ಗೆಲ್ಲಬಹುದಿತ್ತು. ಮೈತ್ರಿಯಿಂದ ಕೈ ಶಾಸಕರು ಪದೇಪದೆ ಬಂಡಾಯ ಏಳುತ್ತಿದ್ದಾರೆ. ಎಷ್ಟು ಸಲ ಈ ಶಾಸಕರನ್ನು ಸಮಾಧಾನ ಪಡಿಸಲು ಸಾಧ್ಯ? ಆದಷ್ಟು ಬೇಗ ಮೈತ್ರಿಯಿಂದ ಹೊರಬರಬೇಕೆಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಅವರ ಅಳಲಿಗೆ ರಾಹುಲ್ ಗಾಂಧಿ ಸಮ್ಮತಿ ಸೂಚಿಸಿದ್ದು, ಈಗ ತಲೆದೋರಿರುವ ಸಮಸ್ಯೆಗೆ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಇತಿಶ್ರೀ ಹಾಡಲು ಉಭಯ ನಾಯಕರು ತೀರ್ಮಾನಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
Comments are closed.