
ಬೆಂಗಳೂರು: ಎಲ್ಟಿಟಿಇ ಪತನದ ನಂತರ 10 ವರ್ಷಗಳಿಂದ ಶಾಂತಿಯ ಜೀವನ ನಡೆಸುತ್ತಿದ್ದ ಶ್ರೀಲಂಕನ್ನರಿಗೆ ಇವತ್ತು ಆರೇಳು ಕಡೆ ಸಂಭವಿಸಿದ ಬಾಂಬ್ ಸ್ಫೋಟಗಳು ಮಾನಸಿಕವಾಗಿ ಘಾಸಿಗೊಳಿಸಿವೆ. ಈ ಬಾಂಬುಗಳು ಸುಮಾರು 200 ಮಂದಿಯನ್ನು ಬಲಿ ತೆಗೆದುಕೊಂಡಿದ್ದಕ್ಕಿಂತ ಹೆಚ್ಚಾಗಿ ಲಂಕನ್ನರ ಶಾಂತಿಯ ಕನಸನ್ನು ಭಗ್ನಗೊಳಿಸಿವೆ. ಆರ್ಥಿಕ ಅಭಿವೃದ್ಧಿ ಹೆಚ್ಚಳಗೊಳ್ಳುತ್ತಿದ್ದು, ತಮ್ಮ ಸುಂದರ ದೇಶ ಇನ್ನಷ್ಟು ಸುಂದರವಾಗುತ್ತಿದೆ ಎಂದು ಹೆಮ್ಮೆಯಿಂದ ಜೀವನ ನಡೆಸುತ್ತಿದ್ದ ಸಿಂಹಳೀಯರು ಈ ಬಾಂಬ್ ದಾಳಿಯಿಂದ ಮಾನಸಿಕವಾಗಿ ಜರ್ಝರಿತವಾಗಿದ್ದಾರೆ, ಆಘಾತಗೊಂಡಿದ್ದಾರೆ.
ಈಸ್ರ್ ಹಬ್ಬದ ಸಂಭ್ರಮದಲ್ಲಿದ್ದ ಲಂಕಾ ರಾಜಧಾನಿ ಕೊಲಂಬೋದ 3 ಚರ್ಚ್ ಮತ್ತು 3 ಹೋಟೆಲ್ಗಳಲ್ಲಿ ಭಾನುವಾರ ಬೆಳಗ್ಗೆ 8:45ರ ಸಮಯದಲ್ಲಿ ಬಾಂಬ್ಗಳು ಸ್ಫೋಟಗೊಂಡು 185ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದ್ದವು. ಭಾರತೀಯರನ್ನೇ ಹೆಚ್ಚಾಗಿ ಗುರಿ ಮಾಡಿಕೊಂಡು ನಡೆಯಿತೆನ್ನಲಾದ ಈ ಸ್ಫೋಟದಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೋಚಿಕಾಡೆ, ಸೇಂಟ್ ಸೆಬಾಸ್ಟಿಯನ್ ಮತ್ತು ಬಾಟಿಕಲೋವಾ ಚರ್ಚ್ಗಳು ಹಾಗೂ ಹೈಟೆಕ್ ಹೋಟೆಲ್ಗಳಾದ ಶಾಂಗ್ರಿಲಾ, ಸಿನ್ನಮೋನ್ ಗ್ರ್ಯಾಂಡ್ ಮತ್ತು ಕಿಂಗ್ಸ್ಬರಿ ಹೋಟೆಲ್ಗಳಲ್ಲಿ ಸಂಭವಿಸಿದ ಈ ದುರಂತದಲ್ಲಿ ಸಾವಿನ ಪ್ರಮಾಣ 200 ಗಡಿ ಮುಟ್ಟುವ ಅಪಾಯವುಂಟು.
ಈ ಸರಣಿ ಬಾಂಬ್ ಸ್ಫೋಟಗಳನ್ನ ಯಾರು ಮಾಡಿದರೆಂದು ಇನ್ನೂ ಗೊತ್ತಾಗಿಲ್ಲವಾದರೂ, ಈ ಉಗ್ರ ದಾಳಿಗಳು ವ್ಯವಸ್ಥಿತವಾಗಿ ನಡೆದಿರುವುದು ಲಂಕನ್ನರಿಗೆ ಹೆಚ್ಚು ಘಾಸಿಗೊಳಿಸಿದೆ. 10 ವರ್ಷಗಳಿಂದ ಭಯದ ವಾತಾವರಣವಿಲ್ಲದೆ ಶಾಂತಿಯ ಫಲ ಅನುಭವಿಸುತ್ತಿದ್ದ ಶ್ರೀಲಂಕಾದಲ್ಲಿ ಮತ್ತೊಮ್ಮೆ ಸಂಘಟಿತ ಭಯೋತ್ಪಾದನೆ ತಲೆ ಎತ್ತಿದೆ ಎಂಬ ವಾಸ್ತವ ಸಂಗತಿಯನ್ನು ಜೀರ್ಣಿಸಿಕೊಳ್ಳಲು ಅಲ್ಲಿನವರಿಗೆ ಸಾಧ್ಯವಾಗುತ್ತಿಲ್ಲ.
ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಉಪಾಧ್ಯಕ್ಷ ಶಶಿ ದನತುಂಗೆ ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಕೊಲಂಬೋದ ಹೋಟೆಲ್ನಲ್ಲಿ ಸಂಜೆ ಆಚರಿಸಲು ಹೊರಟಿದ್ದರು. ವಿಮಾನಯಾನ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗಾ ಅವರು ಕರೆ ಮಾಡಿ ಶಶಿ ದನತುಂಗೆ ಪತ್ನಿ ದಿಲೀಪಾ ಅವರ ಜನ್ಮದಿನಕ್ಕೆ ಶುಭಾಶಯ ಹೇಳಿದ್ದರು. ಅದಾಗಿ ಕೆಲವೇ ನಿಮಿಷಗಳಲ್ಲಿ ಹೋಟೆಲ್ನಲ್ಲಿ ಬಾಂಬ್ ಸ್ಫೋಟವಾಗಿರುವ ಸುದ್ದಿ ರಾಚಿತು. ಇನ್ನೂ ನಾಲ್ಕೈದು ಕಡೆ ಬಾಂಗ್ ಸ್ಫೋಟಗಳಾಗಿರುವ ಸತ್ಯ ಹೊರಬರುತ್ತಿದ್ದಂತೆಯೇ ಶಶಿ ದನತುಂಗೆ ಅವರು ಗರಬಡಿದಂತಾಗಿ ಸ್ತಬ್ಧರಾಗಿಬಿಟ್ಟರು. ಬಾಂಬ್ ಸ್ಫೋಟದ ತೀವ್ರತೆ ಕಂಡು ಅವರಿಗೆ ಇನ್ಯಾವುದೋ ಕಹಿ ಸತ್ಯ ಅರಿವಾಗಿ ಅದುರಿಹೋದರು.
“2009ರಲ್ಲಿ ಎಲ್ಟಿಟಿಇಗೆ ಸೋಲಾದ ನಂತರ ನಮ್ಮ ಜೀವನ ಬಹಳ ಸುಂದರವಾಗಿತ್ತು. ನಮ್ಮ ಇತಿಹಾಸದಲ್ಲಿ ಇದು ಅತ್ಯಂತ ಶಾಂತಿಯುತ ಘಳಿಗೆಯಾಗಿತ್ತು. ಒಂದೇ ಒಂದು ಭಯೋತ್ಪಾದನೆ ಘಟನೆಯಾಗಿರಲಿಲ್ಲ. ನಾವು ಶಾಂತಿಯ ಫಲ ಅನುಭವಿಸುತ್ತಿದ್ದೆವು” ಎಂದು ನ್ಯೂಸ್18 ವಾಹಿನಿ ಬಳಿ ಶಶಿ ದನತುಂಗೆ ಹೇಳಿಕೊಂಡರು.
ಸಚಿವ ರಣತುಂಗ ಅವರ ಕ್ರಿಕೆಟ್ ಜೊತೆಗಾರ ರೋಷನ್ ಮಹಾನಾಮ ಅವರೂ ನ್ಯೂಸ್18 ಜೊತೆ ಮಾತನಾಡಿ ಈ ಬಾಂಬ್ ದಾಳಿ ಘಟನೆಗೆ ಆಘಾತ ವ್ಯಕ್ತಪಡಿಸಿದರು. “ಇದು ಈಸ್ಟರ್ ಸಂಡೆ. ಯುದ್ಧದ ಕಾಲ ಗತಿಸಿ ಬಹಳ ಕಾಲವಾಯಿತು. ಕಳೆದ 10 ವರ್ಷದಲ್ಲಿ ಶಾಂತಿಯ ಬದುಕಿಗೆ ಒಗ್ಗಿಕೊಂಡಿದ್ದೆವು. ಎಲ್ಲಿಯೂ ಭಯದ ವಾತಾವರಣ ಇರಲಿಲ್ಲ. ಇತ್ತು ಆಗಿದ್ದು ನಿಜಕ್ಕೂ ಘೋರವೇ. ಇಲ್ಲಿಂದ ಪರಿಸ್ಥಿತಿ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಭಯ ಆವರಿಸಿದೆ” ಎಂದು ಮಹಾನಾಮ ಹೇಳಿದರು.
ಕೊಲಂಬೋದಲ್ಲೇ ಇರುವ ಕನ್ನಡಿಗ ವೆಂಕಟೇಶ್ ಕೆ. ರಾವ್ ಅವರಿಗೆ ಈ ಬಾಂಬ್ ಸ್ಫೋಟದ ಸುದ್ದಿ ಕಿವಿಗೆ ಬೀಳುವ ಮುನ್ನ ಹೊರಗೆ ಹೋಗಲು ಅಣಿಯಾಗಿದ್ದರು. ಕೆಲವೇ ವರ್ಷಗಳ ಮುಂಬೈನಿಂದ ಶ್ರೀಲಂಕಾಗೆ ಹೋದ ವೆಂಕಟೇಶ್ ರಾವ್ ಅವರಿಗೆ ಲಂಕಾ ಬಹಳ ಪ್ರಿಯವಾಗಿ ಹೋಗಿತ್ತು. ಶಾಂತಿ ಅಷ್ಟೇ ಅಲ್ಲ ಲಂಕಾ ಸುರಕ್ಷಾ ಭಾವನೆ ಮೂಡಿಸಿತ್ತು. ಇವತ್ತಿನ ಬಾಂಬ್ ದುರಂತವು ಅವರ ಈ ಎಲ್ಲಾ ಭಾವನೆಗಳನ್ನ ಛಿದ್ರಗೊಳಿಸಿತು.
“ಈಸ್ಟರ್ ಭಾನುವಾರದಂದು ಇಂಥ ಭಯೋತ್ಪಾದನೆ ದಾಳಿ ಆಗುತ್ತದೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇದು ನಿಜಕ್ಕೂ ಘನಘೋರ. ಎಲ್ಲಿ ನೋಡಿದರೂ ಆತಂಕ ಮನೆಮಾಡಿದೆ. ನನ್ನ ಅಪಾರ್ಟ್ಮೆಂಟ್ನಲ್ಲಿ ಸಾಕಷ್ಟು ಭಾರತೀಯರು ವಾಸಿಸುತ್ತಿದ್ದಾರೆ. ಅವರೆಲ್ಲರೂ ಹೊರ ಹೋಗಲು ಭಯ ಪಡುತ್ತಿದ್ದಾರೆ. ಲಂಕಾ ಮತ್ತೆ ಸಹಜ ಪರಿಸ್ಥಿತಿಗೆ ಬರಲಿ ಎಂದು ಆಶಿಸುತ್ತೇನೆ” ಎಂದು ಲಂಕಾ ಕನ್ನಡಿಗ ವೆಂಕಟೇಶ್ ತಿಳಿಸಿದರು.
ಲಂಕಾ ತಮಿಳಿಗ ವಿಸಾಕನ್ ಅವರಂತೂ ಆ ದೇಶದ ಭವಿಷ್ಯದ ಬಗ್ಗೆ ಇನ್ನಿಲ್ಲದ ಆತಂಕ ವ್ಯಕ್ತಪಡಿಸುತ್ತಾರೆ. “ಭಯೋತ್ಪಾದನೆಯ ನೆನಪು ಮಸುಕಾಗಿ ಹೋಗಿದ್ದರಿಂದ ಆ ಕ್ಷಣಕ್ಕೆ ನನಗೆ ಈ ಘಟನೆಯನ್ನು ನಂಬಲು ಸಾಧ್ಯವಾಗಲಿಲ್ಲ. ಇದು ಬಹಳ ವ್ಯವಸ್ಥಿತ ಉಗ್ರ ದಾಳಿ ಎಂಬುದು ಅರಿವಿಗೆ ಬಂದ ನಂತರ ಬೆಚ್ಚಿಬಿದ್ದೆ. ನಮಗೆ ಮತ್ತೊಂದು ಹಂತದ ಭಯೋತ್ಪಾದನೆ ಬೇಕಾಗಿಲ್ಲ. ನಮ್ಮ ಸುಂದರ ದೇಶ ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕತೆಯೂ ಪ್ರಗತಿ ಸಾಧಿಸುತ್ತಿದೆ. ಈ ಭಯೋತ್ಪಾದನೆ ಇಲ್ಲಿಗೇ ನಿಂತು ಹೋಗಲಿ” ಎಂದು ವಿಸಾಗನ್ ಆಶಿಸಿದರು.
ವಿಸಾಗನ್ ಅವರ ಈ ಅನಿಸಿಕೆಯು ಇಡೀ ಲಂಕನ್ನರ ಒಟ್ಟಾರೆ ಅಭಿಪ್ರಾಯಕ್ಕೆ ಕನ್ನಡಿ ಹಿಡಿದಂತಿತ್ತು. ಲಂಕಾದ 2.2 ಕೋಟಿ ಜನಸಂಖ್ಯೆ ದಿಗ್ಭ್ರಮೆಗೊಳಗಾಗಿದೆ. ಎಲ್ಟಿಟಿಇಯ ಅಂತ್ಯದೊಂದಿಗೆ ಭಯೋತ್ಪಾದನೆ ಅಂತ್ಯವಾಗುತ್ತದೆ ಎಂದುಕೊಂಡವರಿಗೆ ಹೊಸ ಬೆಳವಣಿಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಶಾಂತಿಪ್ರಿಯ ರಾಷ್ಟ್ರಕ್ಕೆ ಭಯೋತ್ಪಾದನೆ ಮತ್ತೊಮ್ಮೆ ಮುಖ ತೋರಿಸುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಉಗ್ರರ ಅಟ್ಟಹಾಸದ ಜೊತೆಗೆ ಲಂಕಾದ ಜನಜೀವನವನ್ನು ಹೈರಾಣಾಗಿಸುವ ಸೆಕ್ಯೂರಿಟಿ ಚೆಕ್ಪೋಸ್ಟ್ಗಳು, ಗನ್ ಹಿಡಿದ ಸೈನಿಕರು, ರಾತ್ರಿಯ ನಿಷೇಧಾಜ್ಞೆಗಳು ಮೊದಲಾದವರು ಸಿಂಹಸ್ವಪ್ನವಾಗಿ ಮತ್ತೆ ಕಾಡತೊಡಗುತ್ತವೆ ಎಂದು ಜನರು ಪರಿತಪಿಸತೊಡಗಿದ್ದಾರೆ.
Comments are closed.