
ಅಹಮದಾಬಾದ್: ಬಿಜೆಪಿ ಭೀಷ್ಮ, ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಅನುಮಾನವಾಗಿದ್ದು, ಅವರು ನಿರಂತರವಾಗಿ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
91 ವರ್ಷದ ಆಡ್ವಾಣಿ ಸ್ಪರ್ಧೆ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿದ ಅವರ ಆಪ್ತ ಕಾರ್ಯದರ್ಶಿ ದೀಪಕ್ ಚೋಪ್ರಾ ಅವರು, ಆಡ್ವಾಣಿ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧಾರ ಆಗಿಲ್ಲ. ಅಭ್ಯರ್ಥಿಯಾಗಬೇಕು ಎಂದು ಪಕ್ಷದಿಂದ ಕರೆ ಬಂದ ನಂತರ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಆಡ್ವಾಣಿ ಅವರಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಇನ್ನೂ ಕರೆ ಹೋಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಪಕ್ಷ ಆಡ್ವಾಣಿ ಅವರನ್ನು ಗಾಂಧಿನಗರದಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸಿಲ್ಲ. ಅಡ್ವಾಣಿ ಅವರು ಸ್ಪರ್ಧಿಸುವ ಬಗ್ಗೆ ಪಕ್ಷಕ್ಕೆ ವಿನಂತಿಸಿಲ್ಲ ಎಂದು ಚೋಪ್ರಾ ತಿಳಿಸಿದ್ದಾರೆ.
ಆಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ಅಮಿತ್ ಶಾ ಸ್ಪರ್ಧಿಸುವಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಂದ ಭಾರಿ ಆಗ್ರಹ ಕೇಳಿಬಂದಿದೆ. ಕ್ಷೇತ್ರದಲ್ಲಿ ಯಾರನ್ನು ನಿಲ್ಲಿಸಿದರೆ ಉತ್ತಮ ಎಂಬ ನಿಟ್ಟಿನಲ್ಲಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಪಕ್ಷದ ಕಾರ್ಯಕರ್ತರು ಶಾ ಪರ ಹೆಚ್ಚು ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಆಡ್ವಾಣಿ ಈ ಬಾರಿ ಸ್ಪರ್ಧಿಸದಿದ್ದರೆ ಕ್ಷೇತ್ರದಿಂದ ಶಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
Comments are closed.